ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
ಸಾರ್ವಜನಿಕರು 9/11 ಸೇರಿದಂತೆ ಹಲವು ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಿದ ಸಂದರ್ಭ ಅವುಗಳನ್ನು ನಿರ್ದಿಷ್ಟ ದಿನಗಳೊಳಗೆ ವಿಲೇವಾರಿ ಮಾಡುವ ಕುರಿತು ಪಿಡಿಒಗಳಿಗೆ ಸೂಚನೆ ನೀಡಲಾಗುತ್ತಿದ್ದು, ಸ್ಪಂದಿಸದೇ ಇದ್ದರೆ, ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಎಚ್ಚರಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಸೇರಿದಂತೆ ಇತರ ತಾಲೂಕುಗಳ ಪಿಡಿಒಗಳು ವಿಳಂಬಗತಿಯಲ್ಲಿ ಕೆಲಸ ಮಾಡುತ್ತಿರುವ ಕುರಿತು ದೂರಿದ ಸಂದರ್ಭ ಉತ್ತರಿಸಿದ ಇಒ, ಪಿಡಿಒ ಗಳಿಗೆ ಇದರ ಬಗ್ಗೆ ತಿಳಿಹೇಳಲಾಗುವುದು ಎಂದರು. ಗ್ರಾಪಂಗಳಲ್ಲಿ ಕೋಟಿಗಟ್ಟಲೆ ಹಣ ಬಳಕೆಯಾಗದೆ ಕೊಳೆಯುತ್ತಿದೆ. ಕಾಮಗಾರಿ ಅನುಷ್ಠಾನ ಕುರಿತು ಪಿಡಿಒಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಪ್ರಭು ಹೇಳಿದರು.
ವಿದ್ಯುತ್ ಪರಿವರ್ತಕ ಅಳವಡಿಸಲು ನಿಧಿಯ ಕೊರತೆ, ಗ್ರಾಮ ಮಟ್ಟದಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು, ಸರ್ವರ್ ಸಮಸ್ಯೆ, ನರೇಗಾದಡಿ ಹಣ ಬಾರದ ವಿಚಾರ, ರಸ್ತೆ ಅಗಲೀಕರಣ ಸಂದರ್ಭ ಪರಿಹಾರ ಸಹಿತ ಹಲವು ವಿಚಾರಗಳ ಕುರಿತು ತಾಪಂ ಸದಸ್ಯರು ಮತ್ತು ಆಹ್ವಾನಿತ ಗ್ರಾಪಂ ಅಧ್ಯಕ್ಷರು ಪ್ರಸ್ತಾಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ಅವರು ಸಲಹೆ ಸೂಚನೆಗಳನ್ನು ನೀಡಿದರು. ತಹಸೀಲ್ದಾರ್ ರಶ್ಮಿ ಎಸ್.ಆರ್, ಪಿಡಬ್ಲ್ಯುಡಿ ಎಇಇ ಷಣ್ಮುಗಂ, ಅರಣ್ಯ ಇಲಾಖೆ ವಲಯಾಧಿಕಾರಿ ಬಿ.ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಮೆಸ್ಕಾಂ ಎಇಇ ಪ್ರಶಾಂತ್ ಪೈ, ನಾರಾಯಣ ಭಟ್, ಅಕ್ಷರ ದಾಸೋಹದ ನೋಣಯ್ಯ, ಯುವಜನ ಸಬಲೀಕರಣ ಇಲಾಖೆಯ ನವೀನ್, ಪಶುಸಂಗೋಪನಾ ಇಲಾಖೆಯ ಡಾ. ಹೆನ್ರಿ, ಕೃಷಿ ಇಲಾಖೆಯ ನಾರಾಯಣ ಶೆಟ್ಟಿ ಸಹಿತ ಅಧಿಕಾರಿಗಳು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ಪ್ರಭಾಕರ ಪ್ರಭು, ಉಸ್ಮಾನ್ ಕರೋಪಾಡಿ, ಎಂ.ಆರ್. ಹೈದರ್, ಯಶವಂತ ಪೊಳಲಿ, ರಮೇಶ್ ಕುಡ್ಮೇರು, ಧನಲಕ್ಷ್ಮೀ ಬಂಗೇರ, ಸಂಜೀವ ಪೂಜಾರಿ, ಮಂಜುಳಾ ಕುಶಲ, ಗೀತಾ ಚಂದ್ರಶೇಖರ್, ನಸೀಮಾ ಬೇಗಂ, ಮಹಾಬಲ ಆಳ್ವ, ಆದಂ ಕುಂಞ, ಶೋಭಾ ರೈ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.