www.bantwalnews.com Editor: Harish Mambady
ಮೇಲ್ಕಾರ್ ಮಾರ್ನಬೈಲಿನಲ್ಲಿರುವ ಮಹಿಳಾ ಕಾಲೇಜಿನಲ್ಲಿ ಭಾನುವಾರ ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಿರತ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಸಾಹಿತ್ಯ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, ಬುದ್ಧಿ ಶಿಕ್ಷಣ ಕೊಡುತ್ತದೆ, ಸಾಹಿತ್ಯ ಹೃದಯವನ್ನು ಕೊಡುತ್ತದೆ ಇವೆರಡನ್ನೂ ಸಮತೂಕದಲ್ಲಿ ಕೊಂಡೊಯ್ಯುವ ಕಾರ್ಯ ನಡೆಯಬೇಕು, ನಮ್ಮ ಮೂಲ ಬೇರುಗಳನ್ನು ಕಂಡುಕೊಳ್ಳಲು ಮತ್ತು ಮನುಷ್ಯ ಸಂಬಂಧದ ಸೂಕ್ಷ್ಮತೆಯ ಅರಿವು ಪಡೆಯಲು ಸಾಹಿತ್ಯ ಸಹಕಾರಿಯಾಗುತ್ತದೆ ಎಂದರು.
ತುಳು ಮಣ್ಣಿನ ಸಾಹಿತ್ಯದ ಕುರಿತು ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ತುಳು ಬದುಕಿನ ಕುರಿತು ಉದಾಹರಣೆಗಳೊಂದಿಗೆ ವಿವರಿಸಿ, ಕತ್ತರಿಯಂತೆ ವಿಭಜಿಸುವವರ ಮಧ್ಯೆ ಸೂಜಿಯಂತೆ ಪೋಣಿಸುವ ಮನೋಧರ್ಮ ರೂಢಿಸಿಕೊಳ್ಳಲು ಸಾಹಿತ್ಯ ಪೂರಕ ಎಂದರು.
ಹಿರಿಯ ಕವಿ, ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರಿಗೆ ನಿರತ ಸಾಹಿತ್ಯ ಪ್ರಶಸ್ತಿಯನ್ನು ಅತಿಥಿಗಳು ಪ್ರದಾನ ಮಾಡಿದರು. ನಿರತ ಸಾಹಿತ್ಯ ಸಂಪದ ಗೌರವಾಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರದಾ ಪ್ರೌಢಶಾಲೆ ಪಾಣೆಮಂಗಳೂರಿನ ಸಂಚಾಲಕ, ಸಾಹಿತಿ ವೇದಮೂರ್ತಿ ಜನಾರ್ದನ ಎಂ.ಭಟ್, ಹಿರಿಯ ಸಾಹಿತಿ ಸವಿತಾ ಎಸ್. ಭಟ್ ಅಡ್ವಾಯಿ, ಮೇಲ್ಕಾರ್ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಬಿ.ಕೆ.ಅಬ್ದುಲ್ ಲತೀಫ್, ಉಪನ್ಯಾಸಕಿ ಗೀತಾ ಎಸ್.ಕೋಂಕೋಡಿ, ಉಪನ್ಯಾಸಕ ಡಿ.ಬಿ.ಅಬ್ದುಲ್ ರಹಿಮಾನ್, ಶಿಕ್ಷಕಿ, ಲೇಖಕಿ ಸುಧಾ ನಾಗೇಶ್, ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬೃಜೇಶ್ ಅಂಚನ್, ಕಾರ್ಯದರ್ಶಿ ದಿನೇಶ್ ಎನ್. ತುಂಬೆ, ಸಂಚಾಲಕರಾದ ವಿನೋದ್ ಕುಮಾರ್ ಪುದು, ಕರುಣಾಕರ ಮಾರಿಪಳ್ಳ, ಅನಿಲ್ ಪಂಡಿತ್, ಅಬ್ದುಲ್ ಮಜೀದ್ ಎಸ್, ಕಸಾಪ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು. ಇದೇ ಸಂದರ್ಭ ನಿವೃತ್ತ ಶಿಕ್ಷಕ ಬಿ.ಮೊಹಮ್ಮದ್ ತುಂಬೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಾರಾನಾಥ ಕೈರಂಗಳ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಾಹಿತ್ಯ ಸಮ್ಮಿಲನದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಎಂ.ಡಿ.ಮಂಚಿ, ಪೂವಪ್ಪ ನೇರಳಕಟ್ಟೆ, ಜಯರಾಮ ಪಡ್ರೆ, ಶಂಶೀರ್ ಬುಡೋಳಿ, ಸೀತಾಲಕ್ಷ್ಮೀವರ್ಮ ವಿಟ್ಲ, ಅಶೋಕ್ ಎನ್. ಕಡೇಶಿವಾಲಯ, ರಜನಿ ಚಿಕ್ಕಯ್ಯಮಠ, ವಿಶ್ವನಾಥ ಕುಲಾಲ್ ಮಿತ್ತೂರು, ಮೈತ್ರಿ ಭಟ್ ಕವನ ವಾಚಿಸಿದರು. ಇದೇ ವೇಳೆ ಮೇಲ್ಕಾರ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಹಳೆಯ ಮತ್ತು ಹೊಸ ವಸ್ತುಗಳ ಪ್ರದರ್ಶನ ಏರ್ಪಡಿಸಿದ್ದರು.