ಮಾಣಿ ಸಮೀಪ ಅನಂತಾಡಿ ಬಂಟ್ರಿಂಜದ ಕೇಸರಿ ಫ್ರೆಂಡ್ಸ್ ಬಳಗ, ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಬೆಳ್ಳಿಹಬ್ಬ ಪ್ರಯುಕ್ತ ಯೋಧ ದೇವೋಭವ ಕಾರ್ಯಕ್ರಮ ಅನಂತಾಡಿಯಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉಪಸ್ಥಿತರಿದ್ದು ಮಾತನಾಡಿ, ರಾಷ್ಟವನ್ನು ಕಾಯುವ ಸೈನಿಕರು ಎಲ್ಲರ ಸುಖ ಸಂತೋಷಕ್ಕಾಗಿ ದೇಶದ ಗಡಿಯಲ್ಲಿ ಅಹರ್ನಿಶಿ ಹೋರಾಡುತ್ತಿದ್ದಾರೆ. ನಮ್ಮ ದೇಶ ನಮ್ಮ ಯೋಧರ ಬಗ್ಗೆ ಅಭಿಮಾನವಿರಬೇಕು ಅವರಿಗೆ ಬೆಂಬಲವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಂಗ್ ಕಮಾಂಡರ್ ಸಂಜೀವ ಪೂಜಾರಿ ಶುಭ ಹಾರೈಸಿದರು. ಅತಿಥಿಗಳಾಗಿ ಬಿಜೆಪಿ ಶಕ್ತಿ ಕೇಂದ್ರದ ಅಭಿಷೇಕ್ ರೈ, ತಾ.ಪಂ ಸದಸ್ಯೆ ಗೀತಾ ಚಂದ್ರಶೇಖರ್, ಅಂಗವಿಕಲ ಸಂಘದ ಅಧ್ಯಕ್ಷ ಪ್ರೊ.ಮುರಳಿಧರ ನಾಯಕ್ , ಗ್ರಾ.ಪಂ. ಅಧ್ಯಕ್ಷ ಸನತ್ ಕುಮಾರ್ , ಉಪಾಧ್ಯಕ್ಷೆ ಕವಿತಾ ಉಮೇಶ್ ಪೂಜಾರಿ, ರೈತ ಮೋರ್ಚಾ ಅಧ್ಯಕ್ಷ ತನಿಯಪ್ಪ ಗೌಡ , ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 35 ವೀರಯೋಧರು ಹಾಗೂ 30 ಸಾಧಕರನ್ನು ಸನ್ಮಾನಿಸಲಾಯಿತು. ಯೋಧ ದೇವೋಭವ, ಕೇಸರಿ ಸನ್ಮಾನ್ ಚಿಣ್ಣರ ಚಿಲಿಪಿಲಿ, ಗಾನ ನೃತ್ಯ ಕುಂಚ ವೈಭವ, ಮೇರಾ ಭಾರತ್ ಮಹಾನ್, ಹಾಸ್ಯ ವೈಭವ ಕಾರ್ಯಕ್ರಮಗಳು ಜರಗಿತು. ಸಮಿತಿ ಅಧ್ಯಕ್ಷ ಹೇಮಂತ್ ಸ್ವಾಗತಿಸಿ, ವೆಂಕಟೇಶ್ ಅನಂತಾಡಿ ಪ್ರಸ್ತಾವಿಸಿ , ಗೋಪಾಲ ಕೃಷ್ಣ ನೇರಳೆಕಟ್ಟೆ ನಿರೂಪಿಸಿ ,ಮನ್ಮಥ ಶೆಟ್ಟಿ ಕೊಡಿಪ್ಪಾಡಿ ವಂದಿಸಿದರು.