ಬಂಟ್ವಾಳ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳಿಂದ ಮಂಜೂರಾದ ಸೌಲಭ್ಯಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ಕೃಷಿ ಇಲಾಖೆಯ ಆವರಣದಲ್ಲಿ ಫಲಾನುಭವಿಗಳಿಗೆ ವಿತರಿಸಿದರು.
2019-20ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ವೀರಕಂಭ ಗ್ರಾಮದ ಮೈರ ಮನೆ ಶೀನ ಪೂಜಾರಿ ಅವರಿಗೆ 1.52 ಲಕ್ಷ ರೂ.ಮೊತ್ತದ(60 ಸಾವಿರ ರೂ.ಸಹಾಯಧನ) ಪವರ್ ಟಿಲ್ಲರ್ ಹಸ್ತಾಂತರಿಸಿದರು. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಕಾರ್ಯಕ್ರಮದಡಿ 5 ಮಂದಿ ಪವರ್ ವೀಡರ್ ವಿತರಿಸಲಾಯಿತು.
ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಜಿಲ್ಲಾ ಮಟ್ಟದಲ್ಲಿ ಗಣಪತಿ ಭಟ್ ಎನ್.ಕೆ. ಸಜೀಪಮೂಡ ಹಾಗೂ ರಾಮಕೃಷ್ಣ ಅಡ್ಯಂತಾಯ ಮಾಣಿಲ ಅವರಿಗೆ ತಲಾ 25 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ತಾಲೂಕು ಮಟ್ಟದಲ್ಲಿ ಮಮತಾ ಶಂಭೂರು, ಜಯರಾಮ ರಾವ್ ಇರಾ, ಜಯಪ್ರಕಾಶ್ ಮಾಣಿಲ, ಹರಿಪ್ರಸಾದ್ ಪ್ರಭು ಕರ್ಪೆ, ಪ್ಯಾಟ್ರಿಕ್ ಫ್ರಾನ್ಸಿಸ್ ಪಿಂಟೋ ಅವರಿಗೆ ತಲಾ 10 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಶೇಕಡಾ 90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕ ಯೋಜನೆಯಡಿ 30 ಫಲಾನುಭವಿಗಳಿಗೆ ಸ್ಪಿಂಕ್ಲೇರ್ ವಿತರಿಸಲಾಯಿತು.
ದ.ಕ.ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಅವರು ಫಲಾನುಭವಿಗಳ ವಿವರ ನೀಡಿದರು. ಸಹಾಯಕ ಕೃಷಿ ಅಧಿಕಾರಿಗಳಾದ ಕೊರಗಪ್ಪ, ಎಸ್.ಕೆ.ಸರಿಕರ ಹಾಗೂ ಇಲಾಖೆ ಸಿಬಂದಿ ಉಪಸ್ಥಿತರಿದ್ದರು.