ಕಸ ಎಸೆಯುವವರನ್ನು ಪತ್ತೆಹಚ್ಚಲು ಕ್ಯಾಮರಾ ಅಳವಡಿಸುವ ವಿಚಾರದ ಹಳೆಯದ್ದು. ಆದರೆ ಇದೀಗ ಬಂಟ್ವಾಳದ ಸಾಫ್ಟ್ ವೇರ್ ತಂತ್ರಜ್ಞರಿಬ್ಬರು ಕ್ಯಾಮರಾವನ್ನು ಮತ್ತಷ್ಟು ಸ್ಮಾರ್ಟ್ ಮಾಡಿಸುವ ತಂತ್ರಜ್ಞಾನ ಸಿದ್ಧಪಡಿಸಿದ್ದಾರೆ. ಈ ಕುರಿತು ಗುರುವಾರ ಪುರಸಭೆ ಆವರಣದಲ್ಲಿ ಸಾಫ್ಟ್ ವೇರ್ ನಿಯಂತ್ರಿತ ಕ್ಯಾಮರಾ ಕಾರ್ಯವೆಸಗುವ ಪ್ರಾತ್ಯಕ್ಷಿಕೆಯನ್ನು ಇಂಜಿನಿಯರುಗಳಾದ ಸಂದೀಪ್ ಬಂಟ್ವಾಳ ಮತ್ತಯು ಕೃಷ್ಣಕುಮಾರ ಸೋಮಯಾಜಿ ನೀಡಿದರು.
www.bantwalnews.com Editor: Harish Mambady
ಸ್ಮಾರ್ಟ್ ಕ್ಯಾಮರಾ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರೋಪಕರಣದ ಕಲಿಕಾವಿಧಾನದ ತಂತ್ರವನ್ನು ಉಪಯೋಗಿಸಿ ಇದು ಉಪಯೋಗಿಸಲ್ಪಡುತ್ತದೆ ಎಂದ ಸಂದೀಪ್, ಕ್ಯಾಮರಾವನ್ನು ನಿರ್ದಿಷ್ಟ ಜಾಗದಲ್ಲಿ ಅಳವಡಿಸಿದ ಬಳಿಕ ಅದಕ್ಕೆ ಹಾಕಲಾದ ಸಾಫ್ಟ್ ವೇರ್ ಕೆಲಸ ಮಾಡಲು ಆರಂಭಿಸುತ್ತದೆ. ನಿರ್ದಿಷ್ಟ ಜಾಗದಲ್ಲಿ ಕಸ ಎಸೆಯುವವರ ಚಿತ್ರವನ್ನು ಸೆರೆಹಿಡಿದು ಫೇಸ್ ಬುಕ್ ಪೇಜ್ ಗೆ ಅದೇ ಅಪ್ಲೋಡ್ ಮಾಡುತ್ತದೆ. ಕಸ ಎಸೆದ ವ್ಯಕ್ತಿಯ ಚಿತ್ರ ಫೇಸ್ ಬುಕ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಇದನ್ನು ಆಯಕಟ್ಟಿನ ಜಾಗದಲ್ಲಿ ಅಳವಡಿಸಿದರೆ, ಸಾಫ್ಟ್ ವೇರ್ ತಂತ್ರಾಂಶವನ್ನು ಸಿದ್ಧಪಡಿಸಿ ಕಸ ಎಸೆಯುವ ಕೃತ್ಯವನ್ನು ಜಗತ್ತಿಗೇ ತಿಳಿಯಪಡಿಸುವ ಕಾರ್ಯ ಮಾಡಿಸಿದಂತಾಗುತ್ತದೆ. ಈ ಪ್ರಯೋಗ ದೇಶದಲ್ಲೇ ಮೊದಲು ಎಂದು ಸಂದೀಪ್ ಹೇಳಿದರು.
ಬೆಂಗಳೂರಿನ ಖಾಸಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ಸುಮಾರು 14 ವರ್ಷ ಕೆಲಸ ನಿರ್ವಹಿಸಿದ ಬಂಟ್ವಾಳ ಚಂಡ್ತಿಮಾರ್ ನಿವಾಸಿ ಸಂದೀಪ್ ಬಂಟ್ವಾಳ ಅಡ್ಯಾರ್ ನಲ್ಲಿ ವಾಗನ್ ಟ್ಯುನೆನ್ ಎಂಬ ಕಾರಿಗೆ ಸಂಬಂಧಿತ ಉದ್ಯಮ ನಡೆಸುತ್ತಿದ್ದರೆ, ಗಾಣದಪಡ್ಪು ನಿವಾಸಿ ಕೃಷ್ಣಕುಮಾರ ಸೋಮಯಾಜಿ ಅವರು ಇನ್ಫೋಸಿಸ್ ನಲ್ಲಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಇದೀಗ ಸ್ವತಂತ್ರವಾಗಿ ಸಾಫ್ಟ್ ವೇರ್ ಉದ್ಯಮ ನಡೆಸುತ್ತಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಕಿರಿಯ ಇಂಜಿನಿಯರ್ ಸಹಾಯಕ ಇಕ್ಬಾಲ್, ಪುರಸಭೆ ಮಾಜಿ ಅಧಿಕಾರಿ ಶಿವಶಂಕರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.