ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿ ಆರ್ ವಿರುದ್ಧ ಜ. 15ರಂದು ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯುವ ಪ್ರತಿಭಟನಾ ಸಭೆಗೆ ಬಂಟ್ವಾಳ ತಾಲೂಕಿನಿಂದ 25ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ ಎಂದು ಎನ್ ಆರ್ ಸಿ ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಎಸ್. ಮುಹಮ್ಮದ್ ಶಫಿ ಹೇಳಿದರು.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಜಿಲ್ಲೆಯಲ್ಲೆ ಒಂದು ಐತಿಹಾಸಿಕ ಪ್ರತಿಭಟನಾ ಸಭೆಯಾಗಿ ಮೂಡಿ ಬರಲಿದ್ದು, ಲಕ್ಷಾಂತರ ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಆದುದರಿಂದ ಸಂವಿಧಾನವನ್ನು ಎತ್ತಿ ಹಿಡಿಯುವ ಎಲ್ಲ ಜಾತಿ ಮತ ಧರ್ಮಗಳ, ಎಲ್ಲ ಜಾತ್ಯಾತೀತ ತತ್ವವನ್ನು ಬೆಂಬಲಿಸುವ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದು ವಿನಂತಿಸಿಕೊಂಡರು.
ಬಂಟ್ವಾಳ ತಾಲೂಕು ಮಟ್ಟದ ಎನ್.ಆರ್.ಸಿ ವಿರೋಧಿ ಹೋರಾಟ ಸಮಿತಿಯಿಂದ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವಂತಹ ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೇ ರೋಕೋ ಚಳವಳಿ, ಅಂಚೆ ಇಲಾಖೆ, ಟೆಲಿಫೋನ್ ಇಲಾಖೆ ಹಾಗೂ ಇತರ ಇಲಾಖೆಗಳ ಮುಂದೆ ಕಾನೂನಿನ ಚೌಕಟ್ಟಿನೊಳಗೆ ನಿರಂತರ ಧರಣಿ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಬಂಟ್ವಾಳದಲ್ಲಿ ಎಲ್ಲ ಪಕ್ಷಗಳ ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶವನ್ನು ನಡೆಸಲಾಗುವುದು ಎಂದರು.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್ , ಎಸ್ಕೆಎಸ್ಸೆಫ್ ನ ಉಸ್ಮಾನ್ ದಾರಿಮಿ, ಮುಖಂಡರಾದ ಪಿ.ಎ. ರಹೀಂ, ಕೆ.ಎಚ್. ಅಬೂಬಕರ್, ಪುರಸಭಾ ಸದಸ್ಯ ಮುನಿಶ್ ಅಲಿ ಅಹ್ಮದ್, ಎಸ್ಸೆಸ್ಸೆಫ್ ನ ಆರೀಸ್ ಪೆರಿಯಪಾದೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸಲಫಿ ಮೂಮೆಂಟ್ ನ ಬಿ.ಎಂ. ಅಬ್ದುಲ್ ಅಝೀಝ್, ಹಾರೂನ್ ರಶೀದ್ ಹಾಜರಿದ್ದರು.