www.bantwalnews.com Editor: Harish Mambady
ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯ ಜ್ಞಾನಮಂದಿರ ಸಮುದಾಯಭವನ ಫೆಬ್ರವರಿ 9ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಲೋಕಾರ್ಪಣೆಗೊಳ್ಳಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ನೇತ್ರಾವತಿ ತಟದಲ್ಲಿರುವ ನಂದಾವರ ಕ್ಷೇತ್ರ ಜಾತಿ, ಮತ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದು, ಜ್ಞಾನಮಂದಿರ ಸಮುದಾಯ ಭವನ ಮತ್ತಷ್ಟು ಸತ್ಕಾರ್ಯಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಕ್ಷೇತ್ರದ ಇತಿಹಾಸ ಹಾಗೂ ಜ್ಞಾನಮಂದಿರ ಸಮುದಾಯ ಭವನ ಮತ್ತು ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಆದ ಪ್ರಗತಿ ಕಾರ್ಯಗಳ ವಿವರ ನೀಡಿದರು.
2007ರಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಶಿಲಾನ್ಯಾಸ ನೆರವೇರಿಸಿದ್ದ ಜ್ಞಾನಮಂದಿರದ ತಳ ಅಂತಸ್ತಿನಲ್ಲಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ನೇತ್ರಧಾರಾ ಹಾಗೂ ಅಕ್ಷಯ ಎಂಬ ಸಭಾಂಗಣಗಳು ಕಳೆದ ವರ್ಷ ಲೋಕಾರ್ಪಣೆಗೊಂಡಿದ್ದು, ವಾರ್ಷಿಕ ಜಾತ್ರಾ ಮಹೋತ್ಸವದ ಆರಂಭದ ದಿನವಾದ ಫೆ.9ರಂದು ಜ್ಞಾನಮಂದಿರ ಲೋಕಾರ್ಪಣೆ ಸಂದರ್ಭ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ರಾಜೇಶ್ ನಾಯ್ಕ್, ವಿಧಾನಪರಿಷತ್ತು ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ ಸಹಿತ ಪ್ರಮುಖರು ಪಾಲ್ಗೊಳ್ಳುವರು ಎಂದರು. ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಎಸ್.ಗಂಗಾಧರ ಭಟ್ ಕೊಳಕೆ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್ ಭಂಡಾರಿ ಉಪಸ್ಥಿತರಿದ್ದರು.