ಕಲ್ಲಡ್ಕ

ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಾಪತ್ರಿಕೆ ‘ಬಹುಮುಖಿ’ ಬಿಡುಗಡೆ

ನಿರಂತರ ಓದು ಬರವಣಿಗೆಗೆ ಸ್ಪೂರ್ತಿ ನೀಡುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ಮೌಲ್ಯಯುತ ಬರಹಗಳನ್ನು‌ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಿಯತ್ರಿ, ಲೇಖಕಿ ಅಕ್ಷತಾರಾಜ್ ಪೆರ್ಲ ಹೇಳಿದರು.

ಜಾಹೀರಾತು

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು  ಇದರ ಆಶ್ರಯದಲ್ಲಿ ಕಲ್ಲಡ್ಕ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿರುವ ಕಲಿಕಲಿಸು ಕಲಾ ಅಂತರ್ಗತ ಪ್ರಯೋಗದ ಕಲಾಬರಹ ಕಲಾಪತ್ರಿಕೆ ಬಹುಮುಖಿ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ , ನಮ್ಮ ಶಾಲೆ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ವರ್ಷದಲ್ಲೇ ಸೃಜನಶೀಲತೆಯನ್ನು ಹೆಚ್ಚಿಸುವ ಐಎಫ್ ಎ ಚಟುವಟಿಕೆಗಳು ನಡೆಯುತ್ತಿರುವುದು ಖುಷಿ ತಂದಿದೆ ಎಂದರು.

ಬಂಟ್ವಾಳ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ರು ಮಾತನಾಡಿ, ಯಾವುದೇ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಅದರಲ್ಲಿ ಯಶಸ್ಸು ಕಾಣುತ್ತೇವೆ. ಸುಂದರವಾಗಿ ಮೂಡಿಬಂದಿರುವ ಬಹುಮುಖಿ ಪತ್ರಿಕೆಯ ಮಕ್ಕಳ ಬರಹಗಳೇ ಇದಕ್ಕೆ ಸಾಕ್ಷಿ ಎಂದರು.

ಪತ್ರಕರ್ತ ಕಿರಣ್ ಸರಪಾಡಿ ಮಾತನಾಡಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಅತ್ಯುತ್ತಮ ಬರಹಗಳನ್ನು ಬರೆಯಬಲ್ಲರು ಎಂಬುದನ್ನು  ಕಲ್ಲಡ್ಕ ಶಾಲೆಯ ಮಕ್ಕಳು ಸಾಬೀತು ಪಡಿಸಿದ್ದಾರೆ, ಪತ್ರಿಕೋದ್ಯಮದ ತರಬೇತಿ ಪಡೆದ ವಿದ್ಯಾರ್ಥಿಗಳ ಬರಹಗಳ ಸಾಲಿಗೆ ಸೇರುವಷ್ಟು ಉತ್ತಮ ಬರಹ ಇದಾಗಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು

ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ಪೂಂಜಾಲಕಟ್ಟೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಎಫ್ಎ ಗ್ರ್ಯಾಂಟಿ ಮೌನೇಶ ವಿಶ್ವಕರ್ಮ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಹುಮುಖಿ ಬಳಗದ  ವಿದ್ಯಾರ್ಥಿಗಳಾದ ಈಶನ್, ನತನ್ಯ,ದೀಕ್ಷಿತ್ ಅನಿಸಿಕೆ ವ್ಯಕ್ತಪಡಿಸಿದರು.  ಶಾಲಾ ಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ವಂದಿಸಿದರು. ಮಾರ್ಗದರ್ಶಿ ಶಿಕ್ಷಕಿ ಸೌಮ್ಯ ಎ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕವೃಂದ ಸಹಕರಿಸಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.