ಬಂಟ್ವಾಳನ್ಯೂಸ್ Editor: Harish Mambady
ಬಿ.ಸಿ.ರೋಡ್ ಪ್ರಯಾಣಿಕರ ತಂಗುದಾಣ ಅಲೆಮಾರಿಯೊಬ್ಬನ ಡೈನಿಂಗ್ ಟೇಬಲ್. ಅಲ್ಲೇ ಊಟ, ಅಲ್ಲೇ ಬಾಯಿ ತೊಳೆಯುವುದು, ಅಲ್ಲೇ ಉಗುಳುವುದು..
ಬಸ್ ನಿಲ್ದಾಣವೋ ಅಲೆಮಾರಿಗಳ ತಾಣವೋ ಎಂಬಂತೆ ಈ ಚಿತ್ರಗಳು ಕಂಡುಬಂದರೆ ಅಚ್ಚರಿ ಇಲ್ಲ. ಇದು ಬಿ.ಸಿ.ರೋಡ್ ನಲ್ಲಿ ಪುರಸಭೆ ಪ್ರಯಾಣಿಕರಿಗೆಂದು ನಿರ್ಮಿಸಿದ ಬಸ್ ಪ್ರಯಾಣಿಕರ ತಂಗುದಾಣ. ಎದುರು ಬಸ್ಸುಗಳು ನಿಂತರೆ, ಪ್ರಯಾಣಿಕರಿಗೆ ನಿಲ್ಲಲು ಇದೇ ತಂಗುದಾಣದ ಪಕ್ಕ ಇರುವ ವಾಣಿಜ್ಯ ಮಳಿಗೆಗಳ ಎದುರು ಸಾಗಬೇಕು. ಕಾರಣ ಇಷ್ಟೇ.
ಮೂತ್ರದ ವಾಸನೆ, ಹೆಜ್ಜೆ ಇಟ್ಟಲ್ಲೆಲ್ಲಾ ಉಗುಳಿದ ಅಸಹ್ಯ ನೋಟ, ಅಲ್ಲೇ ತಿಂದು ಬಿಸಾಡಿದ ಪೊಟ್ಟಣಗಳು, ಠಿಕಾಣಿ ಹೂಡುವ, ಅಲ್ಲೇ ಮಲಗಿ ವಿಶ್ರಾಂತಿ ಪಡೆಯುವ ಅಲೆಮಾರಿಗಳು ಇಲ್ಲಿ ತುಂಬಿಹೋಗಿದ್ದಾರೆ.
ಲಯನ್ಸ್ ಸಂಸ್ಥೆಯವರು ಇಲ್ಲಿ ಉಚಿತವಾಗಿ ಫ್ಯಾನ್ ಒದಗಿಸಿಕೊಟ್ಟಿದ್ದಾರೆ. ಅದರಡಿಯಲ್ಲಿ ಅಲೆಮಾರಿಗಳು ಗಡದ್ದಾಗಿ ನಿದ್ದೆ ಮಾಡುತ್ತಾರೆ. ಯಾರಾದರೂ ವೃದ್ಧರು, ಮಹಿಳೆಯರು, ಮಕ್ಕಳು ಇಲ್ಲಿ ಕುಳಿತುಕೊಳ್ಳಲು ಬಂದರೆ ಅಸಹ್ಯವನ್ನು ಕಂಡು ಬದಿಯಲ್ಲಿ ನಿಲ್ಲುತ್ತಾರೆ.
ಬಂಟ್ವಾಳ ಬಡ್ಡಕಟ್ಟೆ ಮತ್ತು ಕೊಟ್ರಮನಗಂಡಿಯಲ್ಲಿ ಇರುವ ಬಸ್ ನಿಲ್ದಾಣಗಳ ಪೈಕಿ ಬಡ್ಡಕಟ್ಟೆಯ ತಂಗುದಾಣವನ್ನು ಒಂದೂವರೆ ವರ್ಷದ ಹಿಂದೆ ರೋಟರಿ ಕ್ಲಬ್ ಬಂಟ್ವಾಳ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜೇಸಿ ನೆರವಿನೊಂದಿಗೆ ಜೀರ್ಣೋದ್ಧಾರ ಮಾಡಲಾಗಿತ್ತು. ಕೊಟ್ರಮನಗಂಡಿಯಲ್ಲಿರುವ ಬಸ್ ನಿಲ್ದಾಣಕ್ಕೆ ಬಸ್ಸೇ ಬರುವುದಿಲ್ಲ. ಬಂಟ್ವಾಳದ ಕತೆ ಹೀಗಾದರೆ, ಬಿ.ಸಿ.ರೋಡಿನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಪ್ರವೇಶಿಸುವುದು ಕಡಿಮೆ.
ಕೆಲವೊಮ್ಮೆ ಸಾರ್ವಜನಿಕರೂ ಇಲ್ಲಿ ಕುಳಿತು, ಕಡ್ಲೆ, ಹಣ್ಣುಗಳನ್ನು ತಿಂದು, ಚಹಾ ಕುಡಿದು ಅಲ್ಲೇ ಕಸವನ್ನು ಎಸೆದುಹೋಗುವ ಪರಿಪಾಠವನ್ನು ಇಟ್ಟುಕೊಳ್ಳುತ್ತಾರೆ
ಅಲೆಮಾರಿಗಳ ಸಮಸ್ಯೆ ಹಾಗೂ ಬಸ್ ನಿಲ್ದಾಣದ ಶುಚಿತ್ವದ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಈ ಕುರಿತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದ್ದಾರೆ.