ಬಂಟ್ವಾಳ: ಶನಿವಾರ ಸಂಜೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿ.ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕನ್ನಡದ ಕಲ್ಹಣ ದಿ.ನೀರ್ಪಾಜೆ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಸಂಘಟಕ ಡಾ. ನಾ.ಮೊಗಸಾಲೆ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದಿ.ನೀರ್ಪಾಜೆ ಅವರ ಬದುಕು, ಸಾಧನೆ ಹಾಗೂ ಅವರೊಂದಿಗಿನ ಒಡನಾಟಗಳನ್ನು ಸ್ಮರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮೊಗಸಾಲೆ, ದಿ.ನೀರ್ಪಾಜೆ ಭೀಮ ಭಟ್ಟರ ಬರೆಹ ಬೇರೆಯಲ್ಲ, ಬದುಕು ಬೇರೆಯಲ್ಲ, ಅವರು ಬರೆದಂತೆ ಬದುಕಿದವರು. ಬಹುತೇಕ ಸಾಹಿತಿಗಳು ಕೇವಲ ಬರಹಗಳಿಗೆ ಮಾತ್ರ ಸೀಮಿತರಾಗಿದ್ದರೆ, ನೀರ್ಪಾಜೆ ಅವನ್ನೆಲ್ಲ ಮೀರಿ ಸಾಹಿತ್ಯ ಲೋಕದಲ್ಲಿ ಮಿಂಚಿದವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ ಭಟ್ಟ ಅಜಕ್ಕಳ ಮಾತನಾಡಿ, ಸಂಸ್ಕೃತಿ ಜೊತೆ ಸಂಬಂಧಗಳನ್ನು ಬೆಸೆಯುವ ಕೆಲಸವನ್ನು ಅನುವಾದಕರು ಮಾಡುತ್ತಾರೆ. ಸಾಹಿತ್ಯ ಸಂಘಟನೆ ಚಟುವಟಿಕೆಗಳನ್ನು ನಡೆಸುವ ಮೂಲಕ ಹಲವು ಸಾಹಿತ್ಯಾಭಿರುಚಿ ಇರುವ ಮನಸ್ಸುಗಳನ್ನು ಒಂದೆಡೆ ಸೇರಿಸುವ ಮಹತ್ತರ ಜವಾಬ್ದಾರಿ ಸಂಘಟಕರದ್ದಾಗಿರುತ್ತದೆ ಎಂದರು. ಉಪನ್ಯಾಸಕಿ ಗೀತಾ ಕೊಂಕೋಡಿ ಡಾ. ನಾ.ಮೊಗಸಾಲೆ ಅವರ ಕುರಿತು ಮಾತನಾಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸನ್ಮಾನಪತ್ರ ವಾಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮೋಹನ್ ರಾವ್, ನೀರ್ಪಾಜೆ ಭೀಮ ಭಟ್ಟರ ಪತ್ನಿ ಶಂಕರಿ ಭೀಮ ಭಟ್ ಉಪಸ್ಥಿತರಿದ್ದರು. ನೀರ್ಪಾಜೆ ಭೀಮಭಟ್ಟರ ಅಭಿಮಾನಿ ಬಳಗ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ಸಂಘಟಕ ಕೊಳಕೆ ಗಂಗಾಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿಮಾನಿ ಬಳಗ ಬೆಳೆದುಬಂದ ದಾರಿ ಕುರಿತು ವಿವರಿಸಿದರು. ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಜಾರಾಮ ವರ್ಮ ವಿಟ್ಲ ವಂದಿಸಿದರು.