ಬಂಟ್ವಾಳ

ಡಾ. ನಾ.ಮೊಗಸಾಲೆ ಅವರಿಗೆ ನೀರ್ಪಾಜೆ ಪ್ರಶಸ್ತಿ ಪ್ರದಾನ ಜ.4ರಂದು

ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಮತ್ತುಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ವತಿಯಿಂದ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಪ್ರದಾನ ಸಮಾರಂಭವು ಜ.4 ರಂದು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಪರಾಹ್ನ 3.30ಕ್ಕೆ ನಡೆಯಲಿದೆ ಎಂದು ಬಳಗದ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.

ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲನೆ ಮಾಡಲಿದ್ದು ಕುವೆಂಪು ಭಾಷಾ ಪ್ರಾಧಿಕಾರ ಅಧ್ಯಕ್ಷ ಗಿರೀಶ್ ಭಟ್ ಅಜಕ್ಕಳ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಉಪನ್ಯಾಸಕಿ ಗೀತಾ ಕೊಂಕೋಡಿ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಿವರಂಜನಿ ಕಲಾ ಕೇಂದ್ರ ಪೊಳಲಿ ಇವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಡಾ. ನಾ.ಮೊಗಸಾಲೆ: ೧೯೪೪ರಲ್ಲಿ ಕನ್ನಡದ ನೆಲ ಕಾಸರಗೋಡಿನ ಕೋಳ್ಯೂರು ಎಂಬಲ್ಲಿ ಡಾ.ನಾ.ಮೊಗಸಾಲೆ ಜನಿಸಿದರು. ತಾಯಿಯ ಸಹೋದರರ ಮನೆಯಾದ ಕನ್ಯಾನದಲ್ಲಿ ವಿದ್ಯಾಭ್ಯಾಸ ಮಾಡಿ, ಉಡುಪಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ, ೧೯೬೫ರಲ್ಲಿ ಕಾರ್ಕಳದ ಕಾಂತಾವರದಲ್ಲಿ ವೈದ್ಯರಾದ ಅವರು ಅಲ್ಲಿ ಸಾಹಿತ್ಯ ಕೃಷಿಯನ್ನೂ ಮಾಡಿದರು.

೧೯೬೫ ರಿಂದ  ೨೦೦೨ರ ತನಕ ವೃತ್ತಿ ಜೀವನದ ಜೊತೆಜೊತೆಯಲ್ಲೇ  ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿರುವ ಮೊಗಸಾಲೆಯವರ ಅಪ್ರತಿಮ ಸಾಧನೆ ಶ್ಲಾಘನೀಯವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು ೫೦ಕ್ಕೂ ಮಿಕ್ಕು ಕೃತಿಗಳನ್ನು ಕೊಡುಗೆಗಳಾಗಿ ಕೊಟ್ಟಿರುವ ಇವರು ವರ್ತಮಾನದ ಮುಖಗಳು, ಪಲ್ಲವಿ , ಮೊಗಸಾಲೆಯ ನೆನಪುಗಳು , ಪ್ರಭವ, ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ, ಅರುವತ್ತರ ತೇರು(ಸಮಗ್ರ ಕಾವ್ಯ), ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಪೂರ್ವೋತ್ತರ (ಸಮಗ್ರ ಕಾವ್ಯ ಸಂಗ್ರಹದ ಪೂರ್ವಭಾಗ) ಎಂಬ ಅಮೂಲ್ಯವಾದ ಕವನ ಸಂಗ್ರಹದ ಹೊತ್ತಿಗೆಗಳನ್ನು  ಪ್ರಕಟಿಸಿರುತ್ತಾರೆ. ಮಣ್ಣಿನ ಮಕ್ಕಳು, ಅನಂತ ಕನಸಿನ ಬಳ್ಳಿ, ನನ್ನದಲ್ಲದ್ದು, ಹದ್ದು, ಧಾತು, ವಿಶ್ವಂಭರ ಮೊದಲಾದ ೧೮ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಆಶಾಂಕುರ, ಹಸಿರುಕೋಲು, ನೇಪಥ್ಯ ಓದು,ಶಬ್ದ ನಿಶಬ್ದಗಳ ನಡುವೆ. ಶರಣರ ನಡೆಹೆಜ್ಜೆ  ಇತ್ಯಾದಿ ಏಳು ಲೇಖನಗಳ ಸಂಕಲನಗಳನ್ನು ನೀಡಿದ್ದಾರೆ. ವೃತ್ತಿ ಸಂಬಂಧಿತ ವೈದ್ಯಕೀಯ ಶಾಸ್ತ್ರಕ್ಕೂ ಕೃತಿಗಳನ್ನು ರಚಿಸಿದ್ದಾರೆ. ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ದಾಂಪತ್ಯ ಯೋಗ ,ಹೆಣ್ಣು ಹೆಣ್ಣನ್ನು ಅರಿಯುವ ಬಗೆ ಇತ್ಯಾದಿ ಅರು ಕೃತಿಗಳು ಮೊಗಸಾಲೆಯವರ ಸಮಗ್ರ  ವೈದ್ಯ ಸಾಹಿತ್ಯ ಎಂಬ ಶೀರ್ಷಿಕೆಯಡಿ ಕೃತಿ ಸಂಪುಟ ಪ್ರಕಟವಾಗಿದೆ. ಮಹತ್ಯ ಪೂರ್ಣವಾದ ಕೃತಿಗಳು ತೆಲುಗು, ಹಿಂದಿ ಮರಾಠಿ, ಇಂಗ್ಲೀಷ್, ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿರುವುದು ಇವರ ಸಾಹಿತ್ಯದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯದ ಜೊತೆಗೆ ಸಂಘಟಕಕಾರರಾಗಿ ಗುರುತಿಸಲ್ಪಟ್ಟ ಮೊಗಸಾಲೆಯವರು ೧೯೭೬ ರಲ್ಲಿ ಕಾಂತಾವರ ಕನ್ನಡ ಸಂಘವನ್ನು ೧೯೭೮ರಲ್ಲಿ ವರ್ದಮಾನ ಸಾಹಿತ್ಯ ಪೀಠ, ೨೦೧೦ರಲ್ಲಿ ಅಲ್ಲಮ ಪ್ರಭು ಪೀಠವನ್ನು ಕಟ್ಟಿ ಬೆಳೆಸಿದ್ದಾರೆ. ಕಾಂತಾವರ ಕನ್ನಡ ಸಂಘವು ೩೦ಕ್ಕೆ ಕಾಲಿಟ್ಟ ನೆನಪಿನಲ್ಲಿ ನಾಡಿಗೆ ನಮಸ್ಕಾರದ ಮೂಲಕ ಕನಿಷ್ಟ ೩೦ ಪುಸ್ತಕಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪ್ರಕಟಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಸವ ರಾಷ್ಟ್ರೀಯ ಪ್ರಶಸ್ತಿ, ಪಂಪಪ್ರಶ್ತಿ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನಕ ಶ್ರೀ ಪ್ರಶಸ್ತಿ, ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿ ಇದ್ದವರು ಇವರಸಾಹಿತ್ಯ ಕೃತಿಗಳಲ್ಲಿ ಕೆಲವು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದ್ದು ಡಾಕ್ಟರೆಟ್ ಅಧ್ಯಯನವು ನಡೆದಿರುವುದು ಇವರ ಕೃತಿಗಳ ಮೌಲ್ಯವನ್ನು ಎತ್ತಿ ಹಿಡಿದಿದೆ. ೨೦೦೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.  ಈ ವರ್ಷ ಕನ್ನಡ ಕಲ್ಹಣ ಖ್ಯಾತಿಯ ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ ನೀಡಲಾಗುತ್ತಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts