ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸನಿಹದ ಮೈದಾನದಲ್ಲಿ ಬಂಟ್ವಾಳ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಯೋಜಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕರಾವಳಿ ಕಲೋತ್ಸವ ಕಾರ್ಯಕ್ರಮ ವೈವಿಧ್ಯಕ್ಕೆ ಬುಧವಾರ ರಾತ್ರಿ ಸಂಭ್ರಮದ ತೆರೆ ಬಿತ್ತು. ಕಾರ್ಯಕ್ರಮಗಳು ಮುಕ್ತಾಯಗೊಂಡರೂ ಅಮ್ಯೂಸ್ ಮೆಂಟ್ ಪಾರ್ಕ್ ಜನವರಿ 12ರವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸುದರ್ಶನ ಜೈನ್ ಪಂಜಿಕಲ್ಲು ಅಧ್ಯಕ್ಷತೆಯಲ್ಲಿ, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸ್ಥಾಪಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಧಾನ ಸಂಚಾಲಕತ್ವದಲ್ಲಿ ಮೂಡಿಬಂದ ಕರಾವಳಿ ಕಲೋತ್ಸವದಲ್ಲಿ ಗೌರವಾಧ್ಯಕ್ಷರಾಗಿ ಪಿ.ಜಯರಾಮ ರೈ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ ಸಹಿತ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ತಂಡದ ಶ್ರಮದ ಫಲವಾಗಿ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳು, ಸ್ಪರ್ಧೆಗಳಾದ ಕರಾವಳಿ ಸರಿಗಮಪ, ಕರಾವಳಿ ಝೇಂಕಾರ, ಚಿಣ್ಣರೋತ್ಸವ, ಕರಾವಳಿ ಡ್ಯಾನ್ಸ್ ಧಮಾಕಾ, ನಾ ಟಕೋತ್ಸವ, ಚಿಣ್ಣರ ಚಿತ್ತಾರ ಇತ್ತು. ಕೊನೇ ದಿನ ಸಂಗೀತ ರಸಮಂಜರಿ ಪ್ರೇಕ್ಷಕರ ಗಮನ ಸೆಳೆದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ವಹಿಸಿದ್ದರು. ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ರಿಯಾಲಿಟಿ ಶೋ ಖ್ಯಾತಿಯ ಹಾಡುಗಾರರಾದ ಅಖಿಲಾ ಪಜಿಮಣ್ಣು, ಕೀರ್ತನ್ ಹೊಳ್ಳ, ಕೃತಿ ಕೆ.ರೈ ಉಪಸ್ಥಿತರಿದ್ದರು. ಹಿರಿಯ ರಂಗಕರ್ಮಿ ರಮೇಶ್ ರೈ ಕುಕ್ಕುವಳ್ಳಿ ಅವರು ನಾಟಕ ಸ್ಪರ್ಧೆ, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಮಂಚಿ ಅವರು ಚಿತ್ರಕಲಾ ಸ್ಪರ್ಧೆ, ತೀರ್ಥಪ್ರಸಾದ್ ಅವರು ಸಂಗೀತ ಸ್ಪರ್ಧೆ, ರಾಜೇಶ್ ಕಣ್ಣೂರು ಅವರು ಡ್ಯಾನ್ಸ್ ಸ್ಪರ್ಧೆ ಹಾಗೂ ಮನಮ್ ಪಾಣಿಕ್ಕರ್ ಅವರು ಚೆಂಡೆ ಸ್ಪರ್ಧೆಯ ಫಲಿತಾಂಶ ಘೋಷಿಸಿದರು. ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು.
ನಾಟಕ ಸ್ಪರ್ಧೆಯಲ್ಲಿ ತೆಲಿಕೆದ ಕಲಾವಿದೆರ್ ಕೊಯ್ಲ ಪ್ರಥಮ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ದ್ವಿತೀಯ ಹಾಗೂ ಮಾನಸ ಕಲಾವಿದೆರ್ ಫರಂಗಿಪೇಟೆ ತೃತೀಯ ಬಹುಮಾನ ಪಡೆದವು. ಇದೇ ವೇಳೆ ಕಲೋತ್ಸವದ ವಿವಿಧ ಸ್ಪರ್ಧೆಗಳ ತೀರ್ಪುಗಾರರು, ಯಶಸ್ವಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.ಟ್ರಸ್ಟ್ನ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಸ್ತಾವನೆಗೈದು ಮುಂದಿನ ಕರಾವಳಿ ಕಲೋತ್ಸವದ ದಿನಾಂಕ ಘೋಷಿಸಿದರು. ಕಲೋತ್ಸವದ ಗೌರವಾಧ್ಯಕ್ಷ ಜಯರಾಮ ರೈ ಸ್ವಾಗತಿಸಿದರು. ಲೋಕೇಶ್ ಸುವರ್ಣ ಹಾಗೂ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.