ಸಾಹಿತ್ಯದ ಉದ್ದೇಶ ಒಳಿತು ತರುವುದು. ಸರ್ವಜನಕ್ಕೂ ಹಿತಕರವಾದ ಸುಖಕರವಾದ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಸಾಹಿತ್ಯದ ಉದ್ದೇಶ. ಸಾಹಿತ್ಯ ಪಯಣ ಮನಸುಗಳನ್ನು ವಿಕಸನಗೊಳಿಸುತ್ತ ಸಾಗಲಿ ಎಂದು ಬಂಟ್ವಾಳ ತಾಲೂಕು ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ. ಧರಣೀದೇವಿ ಮಾಲಗತ್ತಿ ಹೇಳಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಮ್ಮೇಳನ ಸ್ವಾಗತ ಸಮಿತಿ ಹಾಗೂ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಹಯೋಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಎರಡು ದಿನಗಳ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಭಾಷೆಯ ಪಠ್ಯಗಳನ್ನು ಬಾಲ್ಯದಿಂದಲೇ ಕಲಿಯುವುದು ಬಹಳ ಮುಖ್ಯ. ಸರ್ವ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಇವುಗಳನ್ನು ಉಳಿಸುವುದು ನಮ್ಮ ಆದ್ಯತೆ. ಸಾಹಿತ್ಯ ಸರ್ವರಿಗೂ ಹಿತವನ್ನುಂಟು ಮಾಡುವ ಬದುಕಿನ ರೀತಿಯನ್ನೂ ಪೋಷಿಸಬೇಕು. ಬರವಣಿಗೆ ಚಿಂತನೆಯನ್ನು ಉದ್ದೀಪಿಸುವ ಕೆಲಸವನ್ನು ಮಾಡಬೇಕೇ ಹೊರತು, ಭಾವಾವೇಶಕ್ಕೊಳಗು ಮಾಡುವುದನ್ನಲ್ಲ ಎಂದು ಅವರು ಹೇಳಿದರು.
ಹಿರಿಯ ವಿದ್ವಾಂಸ ಡಾ.ಬಿ.ಪ್ರಭಾಕರ ಶಿಶಿಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶಿಕ್ಷಕರೆಲ್ಲರೂ ಕನ್ನಡಕ್ಕಾಗಿ ಏನು ಮಾಡುತ್ತಿದ್ದೇವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕನ್ನಡಕ್ಕೆ ಕುತ್ತು ಬಂದಿದ್ದರೆ ಅದಕ್ಕೆ ಬೇರೆ ಭಾಷೆ ಕಾರಣವಲ್ಲ. ಏಕರೂಪದ ಶಿಕ್ಷಣಕ್ಕೆ ಸರಕಾರ ಒತ್ತು ನೀಡಬೇಕು. ಹಿಂದಿ ಅಥವಾ ಇಂಗ್ಲಿಷ್ ನ ಹೇರಿಕೆ ಸರಿಯಲ್ಲ ಇದರಿಂದ ಸಂಸ್ಕೃತಿ ನಾಶವಾಗುವ ಅಪಾಯವಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೊಸ ಕೃತಿಗಳನ್ನು ಬಿಡುಗಡೆಗೊಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ ರಾವ್ ಪ್ರಸ್ತಾವನೆಗೈದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಆಶಯ ನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಪಿ.ತುಕಾರಾಮ ಪೂಜಾರಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ತುಂಗೆರೆಕೋಡಿ, ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಸ್.ನಾಯ್ಕ್, ಮಾತಾ ಡೆವಲಪರ್‍ಸ್ ನ ಆಡಳಿತ ನಿರ್ದೇಶಕ ಸಂತೋಷ ಶೆಟ್ಟಿ ಅರೆಬೆಟ್ಟು, ಜಿಲ್ಲಾ ಕ.ಸಾಪ ದ ಪದಾಧಿಕಾರಿಗಳಾದ ಡಾ.ಎಂ. ಶ್ರೀನಾಥ್, ಪೂರ್ಣಿಮಾ, ವಿಜಯಲಕ್ಷ್ಮೀ ಶೆಟ್ಟಿ, ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಐತಪ್ಪ ನಾಯ್ಕ್ , ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಗ್ರೇಸ್ ಪಿ.ಸಲ್ದಾನ ವೇದಿಕೆಯಲ್ಲಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ವಸ್ತುಪ್ರದರ್ಶನ ಉದ್ಘಾಟಿಸಿದರು. ಶ್ರೀಕ್ಷೇತ್ರ ನಂದಾವರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಲಾಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ ಸ್ವಾಗತಿಸಿದರು. ಸಿದ್ದಕಟ್ಟೆ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ರಮಾನಂದ ನೂಜಿಪ್ಪಾಡಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸ್ವಾಗತ ಸಮಿತಿ ಸಂಚಾಲಕ ಬಾಲಕೃಷ್ಣ ಆಳ್ವ , ಶಿಕ್ಷಕಿ ರಶ್ಮೀ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಜ್ಞೇಶ್ವರಿ ಶೆಟ್ಟಿ ನಿರ್ವಹಿಸಿದರು. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ ವಂದಿಸಿದರು.
ಮೆರವಣಿಗೆ:
ಮಾಣಿ ರಾಜ್ ಕಮಲ್ ಅಡಿಟೋರಿಯಂ ನಿಂದ ಸಮ್ಮೇಳನದ ಸಭಾಂಗಣದವರೆಗೆ ನಡೆದ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಸೂರಿಕುಮೇರು ಸಂತ ಜೋಸೆಫರ ದೇವಾಲಯದ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಉದ್ಘಾಟಿಸಿದರು. ಮಾಣಿ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು. ಸಮ್ಮೇಳನಾಧ್ಯಕ್ಷೆ ಡಾ. ಧರಣೀದೇವಿ ಮಾಲಗತ್ತಿ ಯವರನ್ನು ತೆರೆದ ಜೀಪಿನಲ್ಲಿ ಸಮ್ಮೇಳನ ಸಭಾಂಗಣಕ್ಕೆ ಕರೆತರಲಾಯಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸ್ವಾಗತ ಸಮಿತಿ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ, ಕಾರ್ಯಾಧ್ಯಕ್ಷೆ ಮಂಜುಳಾ ಮಾಧವ ಮಾವೆ, ತಾ.ಪಂ.ಸದಸ್ಯೆ ಮಂಜುಳಾ ಕುಶಲ ಪೆರಾಜೆ ತೆರೆದ ಜೀಪಿನಲ್ಲಿ ಅಧ್ಯಕ್ಷರಿಗೆ ಸಾಥ್ ನೀಡಿದರು. ಮೆರವಣಿಗೆ ಸಮಿತಿ ಸಂಚಾಲಕರಾದ ಉದಯ ಕುಮಾರ್ ರೈ, ಸುದೀಪ್ ಕುಮಾರ್ ಶೆಟ್ಟಿ,ರತ್ನಾಕರ, ಗಣೇಶ್ ರೈ, ನರಸಿಂಹ ಮಾಣಿ ಹಾಗೂ ಸಮಿತಿ ಸದಸ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127