ಬದಲಾವಣೆಯ ಹೊಸದಿಕ್ಕಿನಲ್ಲಿ ಹೊಸ ಹೆಜ್ಜೆ ಇಟ್ಟು ಭಾಷಣದ ವೇದಿಕೆಯನ್ನು ತೆರವುಗೊಳಿಸಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿಕೊಡಬೇಕೆಂದು, ಕೊಳ್ನಾಡು ಮಂಚಿ ಪ್ರೌಢಶಾಲಾ ೪೨ನೇ ವಾರ್ಷಿಕೋತ್ಸವದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಶಾಲಾ ನೀಲನಕಾಶೆ ಹೊಂದಿದ ಶಾಲೆಯ ಒಟ್ಟು ಸಾಧನೆಗಳ ಪಕ್ಷಿನೋಟದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಳ್ನಾಡು ಕ್ಷೇತ್ರದ ಜಿ.ಪಂ.ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಗುರುತಿಸುವ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸುವ ಶಾಲಾ ವರ್ಷದ ಉತ್ಸವವು ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದದ್ದು ಎಂದರು. ಬಂಟ್ವಾಳ ತಾ.ಪಂ.ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಮಾತನಾಡಿ ಶಾಲೆಗೆ ಆಗಮಿಸುವ ಪ್ರತೀ ವಿದ್ಯಾರ್ಥಿಯೂ ಕಲಿಕೆಯ್ಲಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಶ್ರಮಿಸಬೇಕು. ವಿದ್ಯಾರ್ಥಿದೆಸೆಯಲ್ಲಿ ತಾನು ಗಳಿಸಿದ ಪದವಿ ಮೂಲಕ ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಯಾಗಿ ನಿರ್ಮಾಣವಾಗುತ್ತಾನೆ ಎಂದರು.
ತಾ.ಪಂ.ಸದಸ್ಯರಾದ ನಾರಾಯಣ ಶೆಟ್ಟಿ ಕುಲ್ಯಾರು, ಶಾಲಾಭಿವೃದ್ಧಿ ಸಮಿತಿ ಕಾರ್‍ಯಾಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಕೊಳ್ನಾಡು ಗ್ರಾ.ಪಂ.ಸದಸ್ಯರಾದ ವನಜಾ ಪೆರ್ಲದಬೈಲು, ಮಂಚಿ ಗ್ರಾ.ಪಂ. ಉಪಾಧ್ಯಕ್ಷರಾದ ಮೋಹನದಾಸ್ ಶೆಟ್ಟಿ ಮತ್ತು ಮಂಚಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಇಂದಿರಾ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯ ವಿ.ಶ್ರೀರಾಮಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಶಿಕ್ಷಕಿ ಶಾಂತ ಎಸ್ ಸ್ವಾಗತಿಸಿ, ಗಣಿತ ಶಿಕ್ಷಕಿ ಸುಮಿತ್ರ ವಂದಿಸಿ, ಕಲಾ ಶಿಕ್ಷಕ ಶ್ರೀ ಜಗನ್ನಾಥ ಪಿ ಕಾರ್‍ಯಕ್ರಮ ನಿರ್ವಹಿಸಿದರು.