ವಿಟ್ಲ

ಡಿ. 31ರಂದು ಮಕ್ಕಳ 15ನೇ ಸಾಹಿತ್ಯ ಸಮ್ಮೇಳನ

  • ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ

ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. 31ರಂದು  ಬಂಟ್ವಾಳ ತಾಲೂಕು ಮಟ್ಟದ ೧೫ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಾವಿರಕ್ಕೂ ಹೆಚ್ಚು ಸಾಹಿತ್ಯ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಮಕ್ಕಳ ಲೋಕ ಬಂಟ್ವಾಳ ಅಧ್ಯಕ್ಷ ಕೆ. ವಿಠಲ ಶೆಟ್ಟಿ ವಿಟ್ಲ ತಿಳಿಸಿದ್ದಾರೆ.

ಮಂಗಳವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ ಭವ್ಯ ಮೆರವಣಿಗೆ ನಡೆಯಲಿದೆ. ವಿಟ್ಲ ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಕನ್ನಡ ಧ್ವಜವನ್ನೂ, ಕ.ಸಾ.ಪ. ಬಂಟ್ವಾಳ ಇದರ ಅಧ್ಯಕ್ಷ ಕೆ. ಮೋಹನ್ ರಾವ್ ಸಾಹಿತ್ಯ ಪರಿಷತ್ ಧ್ವಜವನ್ನೂ ಆರೋಹಣ ಮಾಡುವರು. ವಿದ್ಯಾರ್ಥಿನಿ ಧನ್ಯಶ್ರೀ ಬಿ. ಅಧ್ಯಕ್ಷತೆ ವಹಿಸಲಿದ್ದು, ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷೆ ಪೆರುವಾಯಿ ಶಾಲಾ ವಿದ್ಯಾರ್ಥಿನಿ ವೀಕ್ಷಿತಾ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬೇಕೂರಿನ ಸರಕಾರಿ ಸೆಕೆಂಡರಿ ಶಾಲೆಯ ಕಾವ್ಯ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಸಾಹಿತ್ಯ ಚಟುಟಿಕೆಗಳನ್ನು ಉತ್ತಮವಾಗಿ ನಡೆಸುವ ತಾಲೂಕಿನ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ‘ಸಾಹಿತ್ಯ ತಾರೆ’ಪ್ರಶಸ್ತಿ ಹಾಗೈ ಶಾಲೆಯಲ್ಲಿ ಮಕ್ಕಳ ಯೋಗ ಮತ್ತು ಮೌಲ್ಯಶಿಕ್ಷಣ ಚಟುವಟಿಕೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಅಳಿಕೆಯ ಆನಂದ ಶೆಟ್ಟಿಯವರಿಗೆ ಬಾಲಬಂಧು ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗುವುದು. ಪುತ್ತೂರು ಸುದಾನ ವಸತಿ ಶಾಲೆಯ ಸಹಶಿಕ್ಷಕಿ ಮತ್ತು ಅಂಕಣಕಾರಾದ ಕವಿತಾ ಅಡೂರು  ಸ್ಮರಣ ಸಂಚಿಕೆ ಮತ್ತು ಮಕ್ಕಳಿಂದ ರಚಿತ ಪುಸ್ತಕಗಳನ್ನು ಬಿಡುಗಡೆ ಮಾಡುವರು ಎಂದು ಅವರು ತಿಳಿಸಿದ್ದಾರೆ.

ಸುಬ್ರಾಯ ಪೈ ವಿಟ್ಲ ಗೌರವಾಧ್ಯಕ್ಷತೆ ಮತ್ತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ವಿವಿಧ ಉಪಸಮಿತಿಗಳನ್ನು ಮಾಡಲಾಗಿದೆ. ಕಿರುನಾಟಕ, ಕವಿಗೋಷ್ಠಿ, ಚಿತ್ತ ಚಿತ್ತಾರ ಮತ್ತು ಕಥಾ ಬರವಣಿಗೆ ಕಾರ್ಯಕ್ರಮಗಳು ನಡೆಯಲಿದ್ದು ಇವು ವಿದ್ಯಾರ್ಥಿಗಳನ್ನು ಸಾಹಿತ್ಯರಚನೆಗೆ ಪ್ರೇರೇಪಿಸುವ ಸದಾಶಯವನ್ನು ಹೊಂದಿವೆ. ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಶಾಲೆಯವರು ಸಮ್ಮೇಳನಕ್ಕೆ ಒಂದು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ತಾಲೂಕಿನ ಶಾಲೆಗಳ ಪ್ರಸ್ತುತ, ಹಿಂದಿನ ವರ್ಷದ ವಾರ್ಷಿಕ ಮುದ್ರಿತ, ಹಸ್ತಪ್ರತಿಯಲ್ಲಿರುವ ಸಂಚಿಕೆಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲು ಅವಕಾಶವಿದ್ದು, ಭಾಗವಹಿಸಿದ ಶಾಲೆಗೆ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಗುವುದು. ಗ್ರಾಮಾಂತರದಲ್ಲಿ ಜರಗುವ ಕಾರ್ಯಕ್ರಮದ ನೆನಪಿನ ಬುತ್ತಿಯಾಗಿ ವಿಟ್ಲಶ್ರೀ ಎಂಬ ಸ್ಮರಣ ಸಂಚಿಕೆನ್ನು ರಮೇಶ ಎಂ ಬಾಯಾರು ಅವರ ಸಂಪಾದಕತ್ವದಲ್ಲಿ ಹೊರತರಲಾಗುತ್ತದೆ ಎಂದು ವಿಠಲ ಶೆಟ್ಟಿ ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಕ್ಕಳ ಲೋಕ ಬಂಟ್ವಾಳ ತಾಲೂಕು ಕೋಶಾಧಿಕಾರಿ ರಮೇಶ ಎಂ ಬಾಯಾರು, ಜೊತೆ ಕಾರ್ಯದರ್ಶಿ ಜಯಂತಿ ಉಕ್ಕುಡ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ