www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್(ರಿ) ಬಂಟ್ವಾಳ ಆಶ್ರಯದಲ್ಲಿ ಜ.1ರವರೆಗೆ ನಡೆಯುವ ಕರಾವಳಿ ಕಲೋತ್ಸವ 2019-20 ವೈವಿಧ್ಯಮಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಕ್ಕೆ ಸೋಮವಾರ ಇಳಿಸಂಜೆ ಚಾಲನೆ ದೊರಕಿತು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಿಂದ ಕಲಾವೇದಿಕೆಯವರೆಗೆ ಸಾಗಿ ಬಂದ ಜಾನಪದ ದಿಬ್ಬಣಕ್ಕೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಚಾಲನೆ ನೀಡಿದರು. ಬಳಿಕ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿ ಸೌಹಾರ್ದ ಕಲಾಮಂಟಪದಲ್ಲಿ ಕೀರ್ತಿಶೇಷ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ವೇದಿಕೆಯಲ್ಲಿ ಕರಾವಳಿ ಉತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳು ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಚಿಣ್ಣರಮೋಕೆದ ಕಲಾವಿದರ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು. ಉತ್ತಮ ಕಲಾವಿದನಿಗೆ ಬದುಕು ರೂಪಿಸಲು ಪ್ರಸ್ತುತ ದಿನಗಳಲ್ಲಿ ಅವಕಾಶವಿದ್ದು, ಕಲೆಯನ್ನು ಪ್ರೀತಿಸುವ ಮನಸ್ಸುಗಳಿಗೆ ಪೂರಕವಾದ ಕಾರ್ಯಕ್ರಮಗಳು ರೂಪುಗೊಳ್ಳಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಾಟಕಾಸಕ್ತರಿಗೆ ಸ್ಫೂರ್ತಿ ಕೊಡುವ ಕಾರ್ಯ ಬಂಟ್ವಾಳದಲ್ಲಿ ನಡೆಯುತ್ತಿದೆ ಬಂಟ್ವಾಳದ ಜನರಿಗೆ ಒಂದೇ ವೇದಿಕೆಯಲ್ಲಿ ಪ್ರೋತ್ಸಾಹ ನೀಡುವ ಕಾರ್ಯ ನಡೆದಿದೆ ಎಂದರು.
ಇದೇವೇಳೆ ಚಿಣ್ಣರ ಚಿತ್ತಾರ ಚಿತ್ರಕಲೆ, ವಸ್ತು ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್ ಅನ್ನು ಉದ್ಘಾಟಿಸಲಾಯಿತು. ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಆಶೋಕ್ ಶೆಟ್ಟಿ ಅವರಿಗೆ ಕರಾವಳಿ ಸೌರಭ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಜೇಶ್ ಕೊಟ್ಟಾರಿ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶೋಕ್ ಶೆಟ್ಟಿ ಈಗಾಗಲೇ ಬಂಟ್ವಾಳ ಸಾವಿರಕ್ಕು ಹೆಚ್ಚು ಮಂದಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದು, ಮುಂದಿನ ಕೆಲವೇ ಸಮಯದಲ್ಲಿ ಬಂಟ್ವಾಳ ತಾಲೂಕು ಕಲಾ ತಾಲೂಕಾಗಲಿದೆ ಎಂದರು. ಸಂಗೀತ ಪ್ರತಿಭೆ ಜನ್ಯಾಪ್ರಸಾದ್ ಅನಂತಾಡಿ ಅವರಿಗೆ ಚಿಣ್ಣರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿಣ್ಣರೋತ್ಸವ 2019 ಅಧ್ಯಕ್ಷ ಮಾ.ಆಶ್ಲೇಷ್ ಕೆ. ಕಲಾವಿದೆ ದೀಕ್ಷಾ ಡಿ. ರೈ ಪುತ್ತೂರು, ತಹಸೀಲ್ದಾರ್ ರಶ್ಮೀ ಎಸ್.ಆರ್., ಪುರಸಭಾ ಮಾಜಿ ಸದಸ್ಯ ದೇವದಾಸ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಪಿ. ಜಯರಾಮ ರೈ, ಸ್ವಾಗತ ಸಮಿತಿಯ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿದ್ದರು. ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ನ ಸಂಸ್ಥಾಪಕ ಮೋಹನ್ ದಾಸ್ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕ ರಾಮಚಂದ್ರರಾವ್, ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ತಮ ನಿರೂಪಿಸಿದರು.
ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್.ಮೆರವಣಿಗೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.ಬೊಂಬೆ ಕುಣಿತ, ಕುಣಿತ ಭಜನೆ,ಡೊಳ್ಳುಕುಣಿತ,ಬಣ್ಣದ ಕೊಡೆಗಳ ಸಾಲು, ಎನ್ ಸಿ ಸಿ ವಿದ್ಯಾರ್ಥಿಗಳ ಪಥ ಸಂಚಲನ, ನಾಸಿಕ್ ಬ್ಯಾಂಡ್, ಕೊಂಬು, ಕೇರಳದ ಚೆಂಡೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಸಮಿತಿ ಪದಾಧಿಕಾರಿಗಳಾದ ಟಿ.ಸೇಸಪ್ಪ ಮೂಲ್ಯ, ಎಚ್.ಕೆ.ನಯನಾಡು, ಮಂಜು ವಿಟ್ಲ, ಪ್ರಭಾಕರ ಪ್ರಭು, ಮಹಮ್ಮದ್ ನಂದರಬೆಟ್ಟು, ಶಿವಪ್ರಸಾದ್ ಕೊಟ್ಟಾರಿ ಬಂಟ್ವಾಳ, ಗೋಪಾಲ ಅಂಚನ್, ಪ್ತಕಾಶ್ ಬಿ.ಶೆಟ್ಟಿ, ಮಧುಸೂಧನ್ ಶೆಣೈ, ಮೊಹಮ್ಮದ್ ನಂದಾವರ, ದೇವಪ್ಪ ಕುಲಾಲ್, ನಾರಾಯಣ ಸಿ. ಪೆರ್ನೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.