ಸ್ವಸಹಾಯ ಗುಂಪುಗಳಿಂದಾಗಿ ಸ್ವಾವಲಂಬಿ ಸಮಾಜ ನಿರ್ಮಾಣವಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ ಸ್ವಸಹಾಯ ಸಂಘದ ಸಮಾವೇಶಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಯ ಮಹಿಳಾ ಸಮುದಾಯಕ್ಕೆ ನವಚೈತನ್ಯ ನೀಡಲು ಜೈನ ಮುಖಂಡರ ನೇತೃತ್ವವೇ ಕಾರಣ. ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ. ರಾಜೇಂದ್ರಕುಮಾರ್ ಮಾದರಿ ಕಾರ್ಯ ನಡೆಸಿದ್ದಾರೆ ಎಂದವರು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಸಂಸ್ಥೆಯು ರಾಜ್ಯದ ಕನಿಷ್ಠ ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜೈನ ಸಮುದಾಯ ಅಹಿಂಸಾ ತತ್ವದಡಿ ಕೆಲಸ ಮಾಡುತ್ತಿದ್ದು, ಇದು ಮಾದರಿಯಾಗಿದೆ. ಎಲ್ಲರೂ ಇದನ್ನು ಅನುಸರಿಸಬೇಕು ಎಂದರು. ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ ಆರಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಜಿನರಾಜ ಆರಿಗ, ಪಚ್ಚಾಜೆಗುತ್ತು, ಸುಭಾಶ್ಚಂದ್ರ ಜೈನ್, ಟ್ರಸ್ಟಿಗಳಾದ ಶಮಂತ್ ಕುಮಾರ್ ಜೈನ್ ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರ ಸಂಚಾಲಕ ವೃಷಭಕುಮಾರ ಇಂದ್ರ, ಕ್ಷೇತ್ರ ಸಲಹಾ ಸಮಿತಿ ಅಧ್ಯಕ್ಷೆ ಧನ್ಯಾಕುಮಾರಿ, ಮೇಲ್ವಿಚಾರಕ ಶಿವರಾಜ ಜೈನ್ ಸಹಿತ ದ.ಕ, ಚಿಕ್ಕಮಗಳೂರು ಘಟಕಗಳ ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರದ ಕಾರ್ಯದರ್ಶಿ ಸುಚಿಯಾ ಜೈನ್ ಸ್ವಾಗತಿಸಿದರು. ವಿಜಯಾ ಜೈನ್ ವಂದಿಸಿದರು. ರಿತಿಕಾ ಜೈನ್ ಕೊಯಕ್ಕುಡೆ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಸಂಘದ ಸದಸ್ಯರು ಮತ್ತು ಮಕ್ಕಳಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೃಷಭಕುಮಾರ್ ಇಂದ್ರ ಅಜ್ಜಿಬೆಟ್ಟು, ಮಾಲಿನಿ ಆದಿರಾಜ ಜೈನ್ ಕೊಯಕ್ಕುಡೆ, ಶ್ವೇತಾ ಸಂತೋಷ್ ಜೈನ್ ವಗ್ಗ, ಸಂಧ್ಯಾನಯನ ಸಿದ್ಧಕಟ್ಟೆ ಮತ್ತು ಶಾಲಿನಿ ಜಿನೇಂದ್ರ ಜೈನ್ ಇವುಗಳನ್ನು ನಿರ್ವಹಿಸಿದರು.