ಶನಿವಾರ ಬಂಟ್ವಾಳದಲ್ಲಿ ವ್ಯಾಪಾರ, ವಹಿವಾಟು ಎಂದಿನಂತೆ ನಡೆಯಿತು. ಬಿಗು ಪೊಲೀಸ್ ಬಂದೋಬಸ್ತ್ ಇದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಬಾಧಿತವಾಗಿದ್ದರೆ, ಮಂಗಳೂರಿಗೆ ತೆರಳುವ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳನ್ನು ಹೊರತುಪಡಿಸಿ, ಸರಕಾರಿ ಬಸ್ ಸಂಚಾರ ಇತ್ತು.
ಸರಕಾರಿ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಶುಕ್ರವಾರಕ್ಕಿಂತ ಶನಿವಾರ ಜನಸಂಖ್ಯೆ ಇತ್ತು. ಹೋಟೆಲ್, ಮಳಿಗೆಗಳಿಗೆ ನಿರೀಕ್ಷಿತ ವ್ಯಾಪಾರ ಇಲ್ಲದೇ ಇದ್ದರೂ ಮಧ್ಯಾಹ್ನದ ಬಳಿಕ ಚಟುವಟಿಕೆಗಳು ವೇಗ ಪಡೆದವು. ಬಿ.ಸಿ.ರೋಡಿಗೆ ಆಗಮಿಸುವ ಸ್ಥಳೀಯ ಬಸ್ಸುಗಳಾದ ಮೂಡುಬಿದಿರೆ, ಸರಪಾಡಿ, ಸಿದ್ಧಕಟ್ಟೆ, ಪೊಳಲಿ ಕಡೆಗಳಿಗೆ ತೆರಳುವ ಬಸ್ಸುಗಳು ಇರಲಿಲ್ಲ. ಆದರೆ ಖಾಸಗಿ ವಾಹನಗಳು, ಆಟೊಗಳು ಇದ್ದ ಕಾರಣ ತುರ್ತು ಅಗತ್ಯವುಳ್ಳವರು ಅವುಗಳನ್ನು ನೆಚ್ಚಿಕೊಳ್ಳಬೇಕಾಯಿತು.
ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಹಾಗೂ ದ.ಕ.ಜಿಲ್ಲೆಯಾದ್ಯಂತ ಶುಕ್ರವಾರ ಬಂದ್ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬಸ್ಸುಗಳು ಸಂಚರಿಸದೇ ಇರುವುದು ಹಾಗೂ ಶನಿವಾರವೂ ಕಡಿಮೆ ಜನರ ಓಡಾಟ ಇದ್ದ ಕಾರಣ ಕೆಎಸ್ಸಾರ್ಟಿಸಿ ಬಂದ್ ಘಟನೆಯಿಂದ ನಷ್ಟ ಅನುಭವಿಸಬೇಕಾಯಿತು. ಬಿ.ಸಿ.ರೋಡ್ ಘಟಕದಿಂದ ರಾತ್ರಿ ಬೆಂಗಳೂರಿಗೆ ತೆರಳುವ ಬಸ್ಸುಗಳನ್ನು ಹೊರತುಪಡಿಸಿದರೆ 16 ಬಸ್ ಗಳ ಸಂಚಾರವನ್ನು ಶುಕ್ರವಾರ ರದ್ದುಗೊಳಿಸಬೇಕಾಯಿತು ಎಂದು ಡಿಪೊ ಮ್ಯಾನೇಜರ್ ಶ್ರೀಷ ಭಟ್ ಸುದ್ದಿಗಾರರಿಗೆ ತಿಳಿಸಿದರು.
ಡಿಪೊದಿಂದ ದಿನವಹಿ 59 ಬಸ್ಸುಗಳು ಸಂಚಾರಕ್ಕೆ ಹೊರಡುತ್ತವೆ. ಆದರೆ ಶುಕ್ರವಾರ 16 ಬಸ್ಸುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಭದ್ರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಮಾರ್ಗಗಳಿಗೆ ತೆರಳುವ ಬಸ್ಸುಗಳನ್ನೂ ಪರಿಸ್ಥಿತಿ ನೋಡಿ ಕಳುಹಿಸಲಾಯಿತು. ಆದರೆ ಶನಿವಾರ ಮಂಗಳೂರಿಗೆ ತೆರಳುವ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಬಸ್ಸುಗಳ ಸಂಚಾರ ನಡೆಸಲಾಗಿದೆ ಎಂದವರು ಹೇಳಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127