ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ, ಜಿಲ್ಲೆಯಾದ್ಯಂತ ಸೆ.144ರನ್ವಯ ನಿಷೇಧಾಜ್ಞೆ, ಕೆಲ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಬಂಟ್ವಾಳ ತಾಲೂಕಿನಾದ್ಯಂತ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದರೆ, ಜನಸಂಚಾರ ವಿರಳವಾಗಿದ್ದವು.
ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡ್, ಬಂಟ್ವಾಳ ಪೇಟೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಟ್ಯಾಕ್ಸಿ ಸ್ಟ್ಯಾಂಡ್ ಗಳಲ್ಲಿ, ಆಟೊ ಸ್ಟ್ಯಾಂಡ್ ಗಳಲ್ಲಿ ವಾಹನಗಳು ಕಂಡುಬಂದರೂ ಬಾಡಿಗೆ ಇರಲಿಲ್ಲ.
ಖಾಸಗಿ ವಾಹನಗಳ ಓಡಾಟವೂ ಕಡಿಮೆ ಇತ್ತು. ಸರಕಾರಿ ಲೋಕಲ್ ಬಸ್ ಗಳು ರಸ್ತೆಗೇ ಇಳಿಯಲಿಲ್ಲ. ಖಾಸಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲೂ ಕೆಲವರು ಬಸ್ಸಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದವು.
ಬಿ.ಸಿ.ರೋಡ್ ಬಂಟ್ವಾಳದಲ್ಲಿ ಜನಸಂಚಾರ, ವಾಹನ ಸಂಚಾರ ಇಲ್ಲದ ಕಾರಣ ಇಲ್ಲಿ ತೆರೆದಿದ್ದ ಕೆಲವೊಂದು ಮಳಿಗೆಗಳಲ್ಲಿ ವ್ಯಾಪಾರ, ವಹಿವಾಟು ಕಾಣಿಸದೇ ಇದ್ದರೆ, ಸರಕಾರಿ ಕಚೇರಿಗಳು ಅಘೋಷಿತ ರಜೆ ಆಚರಿಸಿದವು. ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಚೇರಿ ಸಿಬ್ಬಂದಿ ಹೊರತುಪಡಿಸಿದರೆ, ಸಾರ್ವಜನಿಕರು ಬರಲೇ ಇಲ್ಲ.
ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ, ಕೆಲವೆಡೆ ಶಾಲೆಗಳ ವಾರ್ಷಿಕೋತ್ಸವವನ್ನೂ ಮುಂದಕ್ಕೆ ಹಾಕಲಾಯಿತು. ಬೊಂಡಾಲ ಹೈಸ್ಕೂಲ್ ವಾರ್ಷಿಕೋತ್ಸವವನ್ನು ಡಿ.21ರ ಬದಲು 24ರಂದು, ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವವನ್ನು ಡಿ.20ರ ಬದಲು 27, ವಿದ್ಯಾಗಿರಿ ಬಿ.ಆರ್.ಎಂ.ಪಿ.ಶಾಲಾ ವಾರ್ಷಿಕೋತ್ಸವವನ್ನು ಡಿ.28ಕ್ಕೆ ಮುಂದೂಡಲಾಯಿತು.