ಬಂಟ್ವಾಳ

ಹಿರಿಯ ಕಲಾವಿದ, ಯಕ್ಷಗಾನ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪದ್ಯಾಣ ಪ್ರಶಸ್ತಿ ಪ್ರದಾನ

ಕಲಾ ಬದುಕಿನ ಒಂದು ಕಾಲಘಟ್ಟದ ಬಳಿಕ ಪ್ರಾಪ್ತವಾಗುವ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಕಲಾವಿದನಿಗೆ ಸಂತೃಪ್ತ ಭಾವ ತರಲು ಸಹಕಾರಿ. ತನ್ನ ನಡುವೆ ಇರುವ ಸಾಧಕ ಕಲಾವಿದರನ್ನು ಹುಡುಕಿ ಗೌರವಿಸುವುದು ಕೂಡಾ ಸುಸಂಸ್ಕೃತ ಸಮಾಜದ ಜವಾಬ್ದಾರಿಯಾಗಿರುತ್ತದೆ. ಅದು ಕಲೆಗೆ ನೀಡುವ ಗೌರವ ಕೂಡಾ ಹೌದು. ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಎಲ್.ಸಾಮಗ ಹೇಳಿದರು.

ಜಾಹೀರಾತು

ಬಂಟ್ವಾಳ ತಾಲೂಕಿನ ಮಿತ್ತನಡ್ಕ ಸನಿಹದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರುಗಿದ ’ಪದ್ಯಾಣ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡುತ್ತಾ, ಯಕ್ಷಗಾನಕ್ಕೆ ಪಠ್ಯವು ಸಿದ್ಧವಾಗಿದ್ದು ಅದಕ್ಕೊಂದು ಶೈಕ್ಷಣಿಕ ಆವರಣ, ಶಿಸ್ತಿನ ಪ್ರಮಾಣೀಕರಣವಾಗುತ್ತಿರುವುದು ಸಂತೋಷದ ವಿಚಾರ. ಇಂತಹ ಯಕ್ಷಗಾನದ ಶೈಕ್ಷಣಿಕ ಶಿಸ್ತನ್ನು ಹಾಗೂ ಬದ್ಧತೆಯನ್ನು ಮಾಂಬಾಡಿ ಮನೆತನದಲ್ಲಿ ಕಾಣಬಹುದು. ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಸಭಾಧ್ಯಕತೆಯನ್ನು ವಹಿಸಿದ್ದರು. ಯಕ್ಷಶಿಕ್ಷಣ ಗುರು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಹಾರ, ಶಾಲು, ಹಣ್ಣುಹಂಪಲು, ಸಂಮಾನ ಪತ್ರ, ಸ್ಮರಣಿಕೆ ಮತ್ತು ನಿಧಿಯೊಂದಿಗೆ ’ಪದ್ಯಾಣ ಪ್ರಶಸ್ತಿ’ಯನ್ನು ಪ್ರದಾನಿಸಲಾಯಿತು. ವೇದಿಕೆಯಲ್ಲಿ ಮಾಂಬಾಡಿಯರ ಪತ್ನಿ ಲಕ್ಷ್ಮೀ ಉಪಸ್ಥಿತರಿದ್ದರು. ಸಂಮಾನಿತರನ್ನು ಅರ್ಥದಾರಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರು ನುಡಿಹಾರಗಳೊಂದಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಮಾಂಬಾಡಿಯವರ ಕುರಿತು ಪತ್ರಕರ್ತ, ಅಂಕಣಗಾರ ನಾ. ಕಾರಂತ ಪೆರಾಜೆ ಸಂಪಾದಕತ್ವದ ಕಿರು ಪುಸ್ತಿಕೆಯನ್ನು ಟಿ.ಶ್ಯಾಮ ಭಟ್ಟರು ಬಿಡುಗಡೆಗೊಳಿಸಿದರು. ಪದ್ಯಾಣ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಸೇರಾಜೆ ಸತ್ಯನಾರಾಯಣ ಭಟ್ಟರು ಶುಭಾಶಂಸನೆ ಮಾಡಿದರು. ಪದ್ಯಾಣ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಸ್ವಸ್ತಿಕ್ ಪದ್ಯಾಣ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ಪದ್ಯಾಣ ವಂದಿಸಿದರು. ನಾ. ಕಾರಂತ ಪೆರಾಜೆ ನಿರ್ವಹಿಸಿದರು.

ಸಮಿತಿಯ ಅಧ್ಯಕ್ಷರಾದ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಶಿವರಾಮ ಭಟ್.. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಹನುಮಗಿರಿ ಮೇಳದವರಿಂದ ’ಸತ್ಯಾಂತರಂಗ’ ಪ್ರದರ್ಶನ ಜರುಗಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts