ಪ್ರಮುಖ ಸುದ್ದಿಗಳು

ಹೊಸ ವರ್ಷಾಚರಣೆ ಪಾರ್ಟಿ – ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದರೆ ಅಂದರ್

  • ಹೊಸ ವರ್ಷಾಚರಣೆ – ಸೂಚನೆ ಪಾಲನೆ ಕಟ್ಟುನಿಟ್ಟು

2020ರ ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಕಾರ್ಯಪಡೆಯು ಕಾರ್ಯನಿರತವಾಗಿದ್ದು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಚಿತ್ರಕೃಪೆ: ಅಂತರ್ಜಾಲ

ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗದವರು ಈ ಕುರಿತು  ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿಸೆಂಬರ್ 24, ಸಂಜೆ 4 ಗಂಟೆಯೊಳಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು.

ಪೂರ್ವಾನುಮತಿ ಪಡೆಯದೆ  ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು,  ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಿಗೆಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ ಹಾಗೂ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,

ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೋಟೇಲ್‍ಗಳಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ಮದ್ಯ ವಿತರಿಸಲು ಉದ್ದೇಶಿಸಿದ್ದಲ್ಲಿ ಅಬಕಾರಿ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು, ಅನುಮತಿ ಪಡೆದ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಕಚೇರಿಗೆ ಸಲ್ಲಿಸಬೇಕು,

ಆಯೋಜಕರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು, ಆಯೋಜಕರು ಕಾರ್ಯಕ್ರಮ ನಡೆಸುವ ಸ್ಥಳದ ಮುಖ್ಯ ದ್ವಾರ, ಒಳಾವರಣ ಮತ್ತು ಹೊರಾವರಣಗಳಲ್ಲಿ ಸಿ.ಸಿ ಟಿವಿ ಕ್ಯಾಮರ ಅಳವಡಿಸಬೇಕು ಹಾಗೂ ಯಾವುದೇ ಸಮಯದಲ್ಲಿ ಪರಿಶೀಲನೆಗಾಗಿ ರೆಕಾಡಿರ್ಂಗ್/ಫೂಟೇಜ್ ಅನ್ನು ಲಭ್ಯವಿರಿಸಬೇಕು.

 ಬಾರ್, ಮದ್ಯದಂಗಡಿ ಮತ್ತು ಮದ್ಯ ವಿತರಿಸುವ ಸ್ಥಳಗಳಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಸನ್ನಧುದಾರರ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ: 21 ರಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,  

ಹೋಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು, ಸಾರ್ವಜನಿಕ ರಸ್ತೆಯ ಮೇಲೆ ಪಾಕಿರ್ಂಗ್ ಮಾಡಿದಲ್ಲಿ ವ್ಯವಸ್ಥಾಪಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ,  ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೇ ಪ್ರತ್ಯೇಕ ಪಾಕಿರ್ಂಗ್ ವ್ಯವಸ್ಥೆ ಮಾಡಬೇಕು, ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗವುಂಟಾದಲ್ಲಿ ವ್ಯವಸ್ಥಾಪಕರನ್ನೆ ಹೊಣೆಗಾರರನ್ನಾಗಿ  ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,  ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.  ಚಾಲನಾ ರಹದಾರಿ ಹೊಂದಿರುವವರು, ಮದ್ಯಪಾನ ಚಾಲಕರನ್ನು ವಾಹನ ಚಾಲಕರನ್ನಾಗಿ ನೇಮಿಸಿಕೊಳ್ಳಬೇಕು,  ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ.

ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಕಾರ್ಯಕ್ರಮದ ಹಾಗೂ ಇನ್ನಿತರೆ ನೆಪದಲ್ಲಿ ಬಸ್ಸು ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲ್ವೇ ಸ್ಟೇಶನ್ ಹಾಗೂ ಇನ್ನಿತರೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.   ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು, ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ಧ ಮಾಡುವುದನ್ನು ತಡೆಗಟ್ಟಲು ಕೂಡಾ ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಪಡೆಯು ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ, ಸಮುದ್ರ ಕಿನಾರೆಗಳಲ್ಲಿ [ಬೀಚ್ ಪ್ರದೇಶ] ಮಧ್ಯಪಾನ ಮಾಡಬಾರದು, ಹೊಸ  ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ನೆಪದಲ್ಲಿ ಪಟಾಕಿ ಸುಡುಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ, ಯಾವುದೇ ಕಾರಣಕ್ಕೂ ಸಾರ್ವಜನಿಕರ ಮನೆಗಳ ಮುಂದೆ ವಿದ್ಯಾರ್ಥಿಗಳ ಹಾಸ್ಟೇಲ್, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ ಕಾಂಪೌಂಡ್ ಒಳಗಡೆ ಶುಭಾಶಯ ಕೋರುವ ನೆಪದಲ್ಲಿ ಅನಧಿಕೃತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪು ಹೋಗಿ ಕಿರಿಕಿರಿ/ಅಸಭ್ಯವಾಗಿ ವರ್ತನೆ ಮಾಡುವುದನ್ನು ಮತ್ತು ಬಲವಂತವಾಗಿ ಶುಭಾಶಯ ಕೋರುವುದನ್ನು ನಿಷೇಧಿಸಲಾಗಿದೆ. ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲಿಯನ್ನು ಎಸೆಯುವುದು ನಿಷೇಧಗೊಳಿಸಲಾಗಿದೆ, ಹೊಸ ವರ್ಷವನ್ನು ಆಚರಿಸುವವರು ಡಿಸೆಂಬರ್ 31 ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಶುಭಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ