ಬಿ.ಸಿ.ರೋಡಿನಲ್ಲಿರುವ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಗುರುವಾರ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾ.ಪಂ.ನ ಮಾಸಿಕ ಕೆಡಿಪಿ ಸಭೆ ನಡೆಯಿತು.
ಅಕ್ಷರ ದಾಸೋಹ ಅಧಿಕಾರಿ ನೋಣಯ್ಯ ಮಾತನಾಡಿ, ಸರಕಾರದ ಹೊಸ ಮೆನುವಿನಂತೆ ವಾರಕ್ಕೆ ಒಂದು ದಿನ ಗೋಧಿ ಆಹಾರ ನೀಡಲು ಶಾಲೆಗಳಿಗೆ ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಗೋಧಿ ಹುಡಿ ಮಾಡುವುದಕ್ಕೆ ಎಸ್‌ಡಿಎಂಸಿಯೇ ಅನುದಾನ ಭರಿಸಬೇಕಿದೆ ಎಂದು ತಿಳಿಸಿದರು.
ಅಲಂಪುರಿ ಟ್ರಿಪಾರ್ಕನ್ನು ಮಾರ್ಚ್‌ನೊಳಗೆ ಲೋಕಾರ್ಪಣೆಗೊಳಿಸುವ ಯೋಚನೆ ಇದೆ ಎಂದು ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ತಿಳಿಸಿದರು.
ಸರಕಾರಿ ಶಾಲೆಗಳ ಕಟ್ಟಡ ದುರಸ್ತಿಯ ಕುರಿತು ಎಂಜಿನಿಯರಿಂಗ್ ವಿಭಾಗದ ಚರ್ಚಿಸಿ ಶೀಘ್ರ ಮುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರಿಗೆ ಇಒ ಸೂಚನೆ ನೀಡಿದರು. ವಿದ್ಯಾರ್ಥಿಗಳಿಗೆ ತುಳು ಹಾಗೂ ಕೊಂಕಣಿ ಪಠ್ಯ ಪುಸ್ತಕಗಳು ಬಾರದೇ ಇರುವ ಕುರಿತು ಬಿಇಒ ಸಭೆಯ ಗಮನಕ್ಕೆ ತಂದರು.
ಶಾಲಾ ಮಕ್ಕಳಿಗೆ ಚುಚ್ಚುಮದ್ದು ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ಶೇ 70 ಸಾಧನೆ ಆಗಿದೆ, ಡಿಸೆಂಬರ್ ಅಂತ್ಯದೊಳಗೆ ಶೇ.100 ಸಾಧನೆ ಗುರಿ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದರು. ಡಿ.2ರಿಂದ 10ರವರೆಗೆ ಲಸಿಕಾ ಕಾರ್ಯಕ್ರಮಗಳು ನಡೆಯುತ್ತಿವೆ. ತಾಲೂಕಿನ 3 ಪುರುಷರಿಗೆ ಸಂತಾನಶಕ್ತಿಹರಣ ಚಿಕಿತ್ಸೆ ನಡೆದಿದೆ. ತಾಲೂಕಿನಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. ಡಿ.11ರಿಂದ ೩೦ರವರೆಗೆ ಶಾಲಾ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರ ಅಗತ್ಯ ಎಂದು ಹೇಳಿದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿವೃತ್ತ ಅಧಿಕಾರಿ ಮೋಹನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.