ಡಿಸೆಂಬರ್ 1ರಿಂದ ಟೋಲ್ ಗಳಲ್ಲಿ FASTAG ಅಳವಡಿಕೆ ಕಡ್ಡಾಯ. ಇಲ್ಲದಿದ್ದರೆ ದುಪ್ಪಟ್ಟು ಹಣ ಕೊಡಬೇಕು ಎಂಬ ಕಟ್ಟಪ್ಪಣೆ ಹೊರಡಿಸಿದ ಬಳಿಕ ಟೋಲ್ ದಾಟಿ ಹೋಗುವ ವಾಹನ ಸವಾರರು ಅದರ ಅಳವಡಿಕೆಯತ್ತ ಹೊರಟಿದ್ದಾರೆ. ನಿಯಮ ಪಾಲಿಸಬೇಕು ಹೌದು. ಆದರೆ ಅಪ್ಪಣೆ ವಿಧಿಸುವ authority ಗಳು ಎಷ್ಟರಮಟ್ಟಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿವೆ?
ಹೀಗೆಂದು ಹಳಿಯುತ್ತಲೇ ಜನಸಾಮಾನ್ಯ ಹೆದ್ದಾರಿಗಳಲ್ಲಿ ಸಂಚರಿಸುತ್ತಲಿರುತ್ತಾನೆ. ಬಸ್ಸಿನಲ್ಲಿ ಹೋಗುವವನೂ ತನಗರಿವಿಲ್ಲದಂತೆ ರಸ್ತೆಗೆ ಸುಂಕ ತೆರಬೇಕಾಗುತ್ತದೆ.
ನಾವು, ನೀವು ಬೆವರು ಹರಿಸಿ ದುಡಿದ ಹಣದಲ್ಲಿ ಪಾಲು ಕೇಳಿದಾಗ ಕೊಡುವುದು ಪ್ರಜಾಪ್ರಭುತ್ವ ರಾಷ್ಟ್ರವಾದ ಕಾರಣ ನಿಮ್ಮಿಂದ, ನಮ್ಮಿಂದ ವಸೂಲಾದ ಹಣವನ್ನು ರಸ್ತೆ, ವಿದ್ಯುತ್, ಮೂಲಸೌಕರ್ಯಗಳನ್ನು ಒದಗಿಸಲು ನಮ್ಮಿಂದ, ನಿಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಿಗದಿಗೊಳಿಸಿ, ಸದಾ ಅದರ order and maintainance ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತಾರೆ ಎಂಬ ನಂಬಿಕೆಯಿಂದ
ಅಧಿಕಾರಿಗಳೂ ತಮಗೆ ದೊರಕುತ್ತಿರುವ ವೇತನ, ಸೌಲಭ್ಯಗಳು ನಮ್ಮಿಂದ ನಿಮ್ಮಿಂದ ವಸೂಲಾದ ತೆರಿಗೆ ಹಣದಿಂದ ಎಂಬುದನ್ನು ಅರಿತು, ನಮಗೆ, ನಿಮಗೆ ಕಾಲಕಾಲಕ್ಕೆ ಉತ್ತಮ ಸೌಕರ್ಯಗಳನ್ನು ಒದಗಿಸಬೇಕು. ನಾವೂ, ನೀವೂ ನಮ್ಮ ಮನೆ, ನಮ್ಮ ವಸ್ತುಗಳನ್ನು ಹೇಗೆ ಜೋಪಾನವಾಗಿಡುತ್ತೇವೋ ಹಾಗೆಯೇ ರಸ್ತೆ, ಬಸ್ ನಿಲ್ದಾಣ, ಸರಕಾರಿ ಕಚೇರಿ, ಸೊತ್ತುಗಳನ್ನು ಅಷ್ಟೇ ಕಾಳಜಿಯಿಂದ care ತೆಗೆದುಕೊಂಡು, ಅವುಗಳ ನಿರ್ವಹಣೆಯಲ್ಲಿ ಕಾಳಜಿ ವಹಿಸಬೇಕು.
ಆದರೆ ಹಾಗಾಗುತ್ತಿದೆಯೇ ಎಂದು ಪ್ರಶ್ನಿಸಬೇಕಾಗಿಲ್ಲ. ಸುತ್ತಮುತ್ತ ಕಣ್ಣುಬಿಟ್ಟು ನೋಡಿದರೆ ಎಲ್ಲವೂ ಸ್ಪಷ್ಟ. ಒಂದು ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚಿ ತೇಪೆ ಹಾಕಿಸಲು ಹರಸಾಹಸಪಡಬೇಕಾಯಿತು. ಮೂಲಸೌಕರ್ಯಗಳನ್ನು ತಾವೇ ಕೈಯಿಂದ ಕಾಸು ಖರ್ಚು ಮಾಡಿ ಮಾಡಿಸಿದ್ದೇವೆ ಎಂಬಂತೆ ಹೇಳುವವರು, ಅಹುದಹುದು ಎನ್ನುವವರ ತಂಡಗಳೇ ಈಗ ಜಾಸ್ತಿ. ಅದಕ್ಕಾಗಿಯೇ ಈ ಪ್ರಶ್ನೆ. ಸ್ವಾಮೀ, ಜನಪ್ರತಿನಿಧಿಗಳೇ, ಅಧಿಕಾರಿಗಳೇ, ನೀವು ಕಡ್ಡಾಯ, ಕಟ್ಟುನಿಟ್ಟು ಎಂಬಂತೆ ಎಲ್ಲವನ್ನೂ ಜಾರಿ ಮಾಡುತ್ತೀರಿ. ಆದರೆ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಮಾತಿನ ಸೌಧ ಕಟ್ಟುತ್ತೀರಲ್ಲ, ಅದನ್ನು ಯಾವಾಗ ಜಾರಿಗೊಳಿಸುತ್ತೀರಿ, ರಸ್ತೆಗಳು ಹೊಂಡಮಯವಾಗಿವೆ, ಟೋಲ್ ಕಟ್ಟಿದ ಕೂಡಲೇ ಹೊಂಡಕ್ಕೆ ವಾಹನ ಹಾಕಿ ಮುಂದಡಿ ಇಡಬೇಕು, toll plaza ಕ್ಕಿರಬೇಕಾದ ಯಾವುದೇ ಅರ್ಹತೆ ಇಲ್ಲದಂತೆ ಕಾಣಿಸುತ್ತಿರುವ ನಮ್ಮೂರಿನ ಟೋಲ್ ಪ್ಲಾಝದಲ್ಲೂ ವಾಹನವನ್ನು ನಿಲ್ಲಿಸಿ, ಸುಂಕ ವಸೂಲಾತಿ ಮಾಡುವ ಹೊತ್ತಿನಲ್ಲಿ ಅಲ್ಲಿ ಆಂಬುಲೆನ್ಸ್ ಗೆ ಪ್ರತ್ಯೇಕ ಲೇನ್ ಇದೆಯಾ, ಟೋಲ್ ಪ್ಲಾಜಾಕ್ಕಿರಬೇಕಾದ ಅರ್ಹತೆಗಳನ್ನು ಅದು ಪಾಲಿಸುತ್ತಿದೆಯಾ ಎಂಬುದನ್ನು ಒಂದು ದಿನವಾದರೂ ನೋಡಿ ಪರಿಶೀಲಿಸಿದ್ದೀರಾ, ಅದಕ್ಕೆ ಅವರು ಕಾರಣ ಎಂದು ನೀವು, ನೀವು ಕಾರಣ ಎಂದು ಅವರು ಬೊಟ್ಟು ಮಾಡುವ ಬದಲು ಯಾವುದೇ ಕಾಮಗಾರಿಯನ್ನು ಹೇಳಿದ ದಿನದೊಳಗೆ ಮುಗಿಸುವುದು, ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು,.. ಹೀಗೆ ನಾವು ಸುಂಕವನ್ನು ಸಂತೃಪ್ತಿಯಿಂದ ಕಟ್ಟುವಂತೆ ಮಾಡಿದ್ದೀರಾ?
ಟೋಲ್ ಅನ್ನು ಪ್ರಾಮಾಣಿಕವಾಗಿ ಕಟ್ಟುವ ಪ್ರತಿಯೊಬ್ಬರ ಪ್ರಶ್ನೆಯೂ ಇದು. ಬಿಡಿ, ಸುಂಕದವರ ಮುಂದೆ ಸಂಕಟ ಹೇಳಿ ಏನು ಪ್ರಯೋಜನ?
ಇದು ವಾಸ್ತವ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ಸುದ್ದಿ, ಜಾಹೀರಾತುಗಳಿಗೆ ಸಂಪರ್ಕಿಸಿ ದೂರವಾಣಿ: 9448548127