ಸರಕಾರಿ ನೌಕರರು ಸೇವಾವಧಿಯಲ್ಲಿ ನಿರಂತರವಾಗಿ ಜನಸೇವೆಗೆ ತೊಡಗಿದಾಗ ಜನರೂ ಅವರನ್ನು ಸ್ಮರಿಸಿಕೊಳ್ಳುತ್ತಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆ ವತಿಯಿಂದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ, ಕಾನೂನು ಮಾಹಿತಿ ಕಾರ್ಯಾಗಾರ ಮತ್ತು ವಾರ್ಷಿಕ ಮಹಾಸಭೆಯನ್ನು ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಿಗೆ ಜನಸೇವೆ ಮಾಡಲು ಐದು ವರ್ಷಗಳ ಅವಕಾಶ ಲಭಿಸಿದರೆ, ಸರಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ ಪೂರ್ತಿ ದೊರಕುತ್ತದೆ. ಸರಕಾರಿ ನೌಕರರು ರಾಜಕಾರಣಿಗಳಿಗಿಂತಲೂ ಹೆಚ್ಚಿನ ಜವಾಬ್ದಾರಿ ಹೊಂದಿ, ಒತ್ತಡದಿಂದಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಯಾವ ಸಮಯದಲ್ಲಿ ವರ್ಗಾವಣೆಗೊಳ್ಳುತ್ತೇವೆ ಎಂಬ ಆತಂಕವೂ ಅವರಲ್ಲಿರುತ್ತದೆ ಆದರೆ ಅದನೆಲ್ಲಾ ಮೀರಿ ಉತ್ತಮ ಸೇವೆ ನೀಡಿದಾಗಲೇ ಜನರು ತಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಬಂಟ್ವಾಳ ತಾಲೂಕು ಶಾಖೆಯ ಅಧ್ಯಕ್ಷ ಉಮಾನಾಥ ರೈ ಮೇರಾವು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಬಂಟ್ವಾಳ ತಾಲೂಕಿನ ಸರಕಾರಿ ನೌಕರರು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶುಭ ಹಾರೈಸಿದರು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ, ಜನರ ಅಹವಾಲುಗಳನ್ನು ಸ್ವೀಕರಿಸಿ ಅವರಿಗೆ ಕ್ಲಪ್ತ ಸಮಯದಲ್ಲಿ ಒದಗಿಸುವ ಸೇವೆಯನ್ನು ಸರಕಾರಿ ನೌಕರ ಜವಾಬ್ದಾರಿಯುತವಾಗಿ ನಿರ್ವಹಿಸಿದಾಗ ಜನಮನ್ನಣೆ ದೊರಕುತ್ತದೆ, ಕೆಲಸಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಸರಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಜನಾರ್ದನ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ಸಂಘದ ಕಾರ್ಯದರ್ಶಿ ಸಂತೋಷ್‌ಕುಮಾರ್, ಖಜಾಂಚಿ ಬಸಯ್ಯ ಅಲಿಮಟ್ಟಿ, ಉಪಾಧ್ಯಕ್ಷರಾದ ಶಮಂತ್‌ಕುಮಾರ್, ಗಾಯತ್ರಿ ರವೀಂದ್ರ ಕಂಬಳಿ, ಮಂಜುನಾಥ್ ಕೆ.ಎಚ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಂದ್ರ ನಾಯಕ್, ಸಂಘದ ಮಾಜಿ ಕಾರ್ಯದರ್ಶಿ ರಾಮಕೃಷ್ಣ ಪುತ್ತೂರಾಯ ಅವರನ್ನು ಗೌರವಿಸಲಾಯಿತು. ನಿವೃತ್ತ ನೌಕರರು ಹಾಗೂ ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)