ಬಂಟ್ವಾಳದ ತುಳುಕೂಟ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ತುಳು ಕತೆ ಹೇಳುವುದು ಮತ್ತು ತುಳು ಪದ್ಯ ಹಾಡುವ ಸ್ಪರ್ಧೆ ನಡೆಯಿತು, ಸುಮಾರು 140 ವಿದ್ಯಾರ್ಥಿಗಳು ಭಾಗವಹಿಸಿದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಕಾರ್ಯಕ್ರಮ ಉದ್ಘಾಟಿಸಿದರು. ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತುಳುಕೂಟ ಬಂಟ್ವಾಳ ಗೌರವಾಧ್ಯಕ್ಷ ಎ.ಸಿ.ಭಂಡಾರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕಲಾವಿದ ಹಾಗೂ ಎಂ.ಆರ್.ಪಿ.ಎಲ್ ಮ್ಯಾನೇಜರ್ ಸದಾಶಿವ ಡಿ. ತುಂಬೆ, ಚಲನಚಿತ್ರ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಉಪಸ್ಥಿತರಿದ್ದರು.
ಪ್ರದೇಶವಾರು ಬದಲಾವಣೆಗಳಿದ್ದರೂ, ತುಳುವರು ನಾವೆಲ್ಲರೂ ಒಂದೇ ಎಂಬ ಗೌರವ ಎಲ್ಲರಲ್ಲಿದೆಎಂದು ಸ್ಪರ್ಧೆ ಉದ್ಘಾಟಿಸಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್.ಈ ಸಂದರ್ಭ ಹೇಳಿದರು.ಕಲಾವಿದ ಸುಂದರ ರೈ ಮಂದಾರ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದು, ಅವಕಾಶಗಳು ಸಿಕ್ಕಿದಾಗ ಮುನ್ನುಗ್ಗುವ ಅಭ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು. ಅತಿಥಿಗಳಾಗಿ ಮಾತನಾಡಿದ ತುಳುಕೂಟ ಗೌರವಾಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಶಾಲೆಗಳಲ್ಲಿ ತುಳು ಭಾಷೆ ಮಾತನಾಡುದೇ ಅವಮಾನ ಎಂಬ ಕಾಲಘಟ್ಟ ಹಿಂದಿತ್ತು. ಆದರೆ ಈಗ 44 ಶಾಲೆಗಳಲ್ಲಿ ತುಳು ಕಲಿಕೆ ನಡೆಯುತ್ತಿದ್ದು, 1.5 ಕೋಟಿ ಮಂದಿ ತುಳು ಭಾಷೆ ಉಳಿಸುವ ಕೈಂಕರ್ಯದಲ್ಲಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ವಿಶಿಷ್ಟ ಕಲ್ಪನೆಯ ಮೂಲಕ ತುಳುಕೂಟ ಹಮ್ಮಿಕೊಂಡಿರುವ ಸ್ಪರ್ಧೆಗೆ ತುಳುವರಿಂದ ನಿರೀಕ್ಷೆಗೆ ಮೀರಿದ ಸ್ಪಂದನೆ ದೊರಕಿರುವುದು ತೃಪ್ತಿ ತಂದಿದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅವರು ತುಳುಕೂಟದ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಸ್ಪರ್ಧಾ ಸಮಿತಿ ಸಂಚಾಲಕ ರಮೇಶ್ ನಾಯಕ್ ರಾಯಿ ಸ್ವಾಗತಿಸಿದರು. ಮತ್ತೋರ್ವ ಸಂಚಾಲಕ ಗೋಪಾಲ ಅಂಚನ್ ಆಲದಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಸಹಸಂಚಾಲಕ ಸೇಸಪ್ಪ ಮಾಸ್ಟರ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು. ಗಾಯನ ವಿಭಾಗಕ್ಕೆ ಬಿ.ರಾಮಚಂದ್ರ ರಾವ್, ಸುರೇಖಾ ಯಳವರ, ಅಂಜನಾ ರಾಜಗೋಪಾಲ ಹಾಗೂ ಕಥಾ ವಿಭಾಗಕ್ಕೆ ವಿಜಯಲಕ್ಷ್ಮೀ ಸಾಲೆತ್ತೂರು, ಗೋಪಾಲಕೃಷ್ಣ ನೇರಳಕಟ್ಟೆ, ಎಸ್.ಬಿ.ಸರಪಾಡಿ ತೀರ್ಪುಗಾರರಾಗಿ ಸಹಕರಿಸಿದರು.
ಬಂಟ್ವಾಳನ್ಯೂಸ್ www.bantwalnews.com ಸಂಪಾದಕ: ಹರೀಶ ಮಾಂಬಾಡಿ ದೂರವಾಣಿ: 9448548127