ಕೇರಳ ಮಾದರಿಯಲ್ಲಿ ರಾಜ್ಯದ ಶಾಲೆಗಳಲ್ಲೂ ನೀರು ಕುಡಿಯಲೆಂದೇ ಮಕ್ಕಳಿಗೆ ಸಮಯ ನಿಗದಿಪಡಿಸಲು ರಾಜ್ಯ ಸರಕಾರ ಮುಂದಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ನೀರು ಕುಡಿಯಲೆಂದೇ ಸಮಯ ನಿಗದಿಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಕಾರ್ಯಯೋಜನೆ ರೂಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.
ಎಲ್ಲ ಮಕ್ಕಳಿಗೂ ಬಾಟಲ್ ನೀರು ತರಲು ಸಾಧ್ಯವಾಗುವುದಿಲ್ಲ ಮತ್ತು ತಂದರೂ ಚಿಕ್ಕ ಬಾಟಲ್‌ನಲ್ಲಿರುವ ನೀರು ಸಾಕಾಗುವುದಿಲ್ಲ. ಅದಕ್ಕಾಗಿ ಶಾಲೆಗಳಲ್ಲೇ ಶುದ್ಧ ನೀರನ್ನು ಕುಡಿಯ ಬೇಕೆಂಬ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ. ದಿನದ ಯಾವ ಸಮಯದಲ್ಲಿ ವಾಟರ್ ಬೆಲ್ ಬಾರಿಸಬೇಕೆಂಬ ಬಗ್ಗೆ ಇನ್ನು ಕಾರ್ಯಯೋಜನೆ ರೂಪಿಸಿಕೊಳ್ಳಬೇಕಷ್ಟೇ.
ಹೆಚ್ಚಿನ ಜನರೂ ಅಗತ್ಯ ಪ್ರಮಾಣದ ನೀರು ಕುಡಿಯದೇ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮಕ್ಕಳಲ್ಲಂತೂ ಇದು ಸಾಮಾನ್ಯ. ಭಾವೀ ಪ್ರಜೆಗಳು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಕೇರಳದ ಶಾಲೆಗಳಲ್ಲಿ ನೀರು ಕುಡಿಯಲು ಸಮಯ ನಿಗದಿಪಡಿಸಿದಂತೆ ರಾಜ್ಯದಲ್ಲಿಯೂ ಮಾಡಲಾಗುವುದು. ಈಗಾಗಲೇ ಕಾರ್ಯಯೋಜನೆ ರೂಪಿಸಲು ಆಯುಕ್ತರಿಗೆ ಸೂಚಿಸಲಾಗಿದ್ದು, 15 ದಿನಗಳಲ್ಲಿ ಅನುಷ್ಠಾನವಾಗಲಿದೆ ಎಂದು ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಸಚಿವರು ಪ್ರಸ್ತಾಪಿಸಿದ್ದಾರೆ.
ಕೇರಳದಲ್ಲಿ ವಾಟರ್ ಬೆಲ್ ಹೆಸರಿನಲ್ಲಿ ದಿನಕ್ಕೆ ಮೂರು ಹೊತ್ತು ಗಂಟೆ ಬಾರಿಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಪ್ಪದೇ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಕೇರಳದಲ್ಲಿ ಚಾಲ್ತಿಯಲ್ಲಿರುವ ಈ ಕಾರ್ಯಕ್ರಮದ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರ ಟ್ವೀಟ್ ನೋಡಿದ ಶಿಕ್ಷಣ ಸಚಿವರು ರಾಜ್ಯದಲ್ಲಿಯೂ ಇದನ್ನು ಅನುಸರಿಸಲು ಮುಂದಾಗಿದ್ದಾರೆ.
ಕೆಲವು ಮಕ್ಕಳಿಗೆ ಬಲವಂತವಾಗಿ ನೀರು ಕುಡಿಸಿದರೆ ಆಗುವುದಿಲ್ಲ. ಕೆಲವು ಮಕ್ಕಳ ದೇಹಪ್ರಕೃತಿಯೂ ಪದೇ ಪದೇ ನೀರು ಕುಡಿಯಲು ಒಗ್ಗುವುದಿಲ್ಲ. ಶುದ್ಧ ಕುಡಿಯುವ ನೀರು ಪೂರೈಕೆಯೂ ದೊಡ್ಡ ಸವಾಲು. ಇಂಥದ್ದನ್ನೆಲ್ಲ ಗಮನಿಸಿ ಜಾಗರೂಕತೆಯಿಂದ ಇಲಾಖೆ ಹೆಜ್ಜೆ ಇಡಬೇಕಾಗಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127