ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶ್ರೀರಾಮ ಪದವಿ ಕಾಲೇಜು ದಶಮಾನೋತ್ಸವ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ, ಎಂ.ಆರ್.ಪಿ.ಎಲ್. ಮಂಗಳೂರು, ಮಹಿಮಾ ಫೌಂಡೇಶನ್ ರಿ. ಬಂಟ್ವಾಳ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳ ನವೆಂಬರ್ 30ರಂದು ನಡೆಯಲಿದೆ.
ಉದ್ಯೋಗ ಮೇಳದಲ್ಲಿ ಸುಮಾರು 30ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದ್ದು, 1500 ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಎಸ್.ಎಸ್.ಎಲ್.ಸಿ, ಐಟಿಐ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ವಿವೇಕಾನಂದ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗ ಮೇಳಕ್ಕೆ ಸ್ಥಳದಲ್ಲೇ ನೋಂದಾವಣಿ ಮಾಡಬಹುದು. ಬೆಳಗ್ಗೆ 9 ಗಂಟೆಗೆ ನೋಂದಾವಣಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಸಂಜೆ 4.30ರವರೆಗೆ ಮೇಳ ಇರುತ್ತದೆ. ನೋಂದಾವಣಿ ಪ್ರಕ್ರಿಯೆ ಸಂದರ್ಭ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಪದವಿ ವಿದ್ಯಾರ್ಹತೆ ಇರುವವರಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ಬಯೋಡಾಟಾ, ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದು ಎಂದವರು ಮಾಹಿತಿ ನೀಡಿದರು.
ಐಟಿ ಮತ್ತಿತರ ಉದ್ಯೋಗಗಳನ್ನರಸುವವರಿಗೆ, ಬಿಇಯಂಥ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳಿರುತ್ತವೆ. ಆದರೆ ಜನರ ನಡುವೆ ವೃತ್ತಿಕೌಶಲಗಳನ್ನು ನಿರ್ವಹಿಸುವವರಿಗೆ ಉದ್ಯೋಗದಾತರನ್ನು ಹುಡುಕುವ ಸಂಕಷ್ಟಗಳನ್ನು ಮನಗಂಡು ಈ ಮೇಳ ಆಯೋಜಿಸಲಾಗಿದೆ. ಇಲ್ಲಿ ಪ್ಲಂಬಿಂಗ್, ರೆಫ್ರಿಜರೇಶನ್ ಸಹಿತ ವೃತ್ತಿಕೌಶಲಕ್ಕೆ ಸಂಬಂಧಿಸಿದ ಉದ್ಯೋಗಗಳು, ಚಾಲಕವೃತ್ತಿ ಸಹಿತ ಹಲವು ವಿಭಾಗಗಳಿಗೆ ಉಪಯೋಗವಾಗುವಂಥ ವೃತ್ತಿಗೆ ಸೇರ್ಪಡೆಗೊಳ್ಳಲು ವೇದಿಕೆ ರಚಿಸಲಾಗಿದೆ. ಹಿಂದೆ ಉದ್ಯೋಗ ನೋಂದಣಿ ಕೇಂದ್ರಕ್ಕೆ ಅರ್ಜಿ ಹಾಕಿ ಉದ್ಯೋಗಕ್ಕೆ ಕಾಯಬೇಕಿತ್ತು, ಆದರೆ ಈಗ ಹಳ್ಳಿ ಪ್ರದೇಶಗಳಿಗೇ ಕೇಂದ್ರ ಗಳು ಬರುತ್ತಿರುವುದು ಉತ್ತಮ ಬೆಳವಣಿಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಲಯನ್ಸ್ 317 ಡಿ ಉಪರಾಜ್ಯಪಾಲ ವಸಂತಕುಮಾರ್ ಶೆಟ್ಟಿ, ಮಹಿಮಾ ಫೌಂಡೇಶನ್ ನ ಅಧ್ಯಕ್ಷ ಜಗದೀಶ್.ಬಿ., ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ದಯಾನಂದ, ಶ್ರೀರಾಮ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಲಯನ್ ಪೂರ್ವಾಧ್ಯಕ್ಷರಾದ ಲಕ್ಷ್ಮಣ್ ಕುಲಾಲ್ ಅಗ್ರಬೈಲ್,ದಾಮೋದರ ಬಿ.ಎಂ.,ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127