www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
ಬಂಟ್ವಾಳ ತಾಲೂಕಿನ ಪ್ರಸಿದ್ಧ ದೇವಸ್ಥಾನ ಪಾಣೆಮಂಗಳೂರು ಸಮೀಪ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನವೆಂಬರ್ 17ರಂದು ಭಾನುವಾರ ಶ್ರೀ ಸತ್ಯನಾರಾಯಣ ಪೂಜಾ ವಾರ್ಷಿಕೋತ್ಸವದ 40ರ ಸಂಭ್ರಮ, ಧಾರ್ಮಿಕ ಸಭೆ ಮತ್ತು ಮಾಗಣೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಪೂಜೆಗೆ ಸಂಕಲ್ಪ, 11ಕ್ಕೆ ಮಹಾಮಂಗಳಾರತಿ, 11.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ಮತ್ತು ಸಾಧಕರಿಗೆ ಸನ್ಮಾನ ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ಇರಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್. ವಹಿಸುವರು. ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದೀಪ ಪ್ರಜ್ವಲನ ಮಾಡುವರು. ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವೇ.ಮೂ. ಜನಾರ್ದನ ಭಟ್ ಸಾರ್ವಜನಿಕ ಸಾಮೂಹಿಕ ಪೂಜೆಗಳ ಮಹತ್ವದ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪದ್ಮಿನಿ ರಾಮ ಭಟ್ ಆಲಂಗಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಜಯಾನಂದ ಭಾಗವಹಿಸುವರು. ಇದೇ ಸಂದರ್ಭ ಶಿಕ್ಷಣ ಮತ್ತು ಲಲಿತಕಲಾ ಕ್ಷೇತ್ರದ ಸಾಧಕಿ ಶಾರದಾ ಎಸ್. ರಾವ್ ಬೊಕ್ಕಸ, ನಾಟಿ ವೈದ್ಯ ಗಂಗಯ್ಯ ಪೂಜಾರಿ ಕರ್ಮಾರು, ಕೊಂಬು ವಾದನ ದೈವದೇವರ ಸೇವೆಯ ಸಂಜೀವ ಬಂಗೇರ ಕಾಂತುಕೋಡಿ ಮತ್ತು ಕೃಷಿ ಸಾಧಕ ಸೇಸಪ್ಪ ಮೂಲ್ಯ ತಲೆಮೊಗರು ಅವರನ್ನು ಸನ್ಮಾನಿಸಲಾಗುವುದು. ಕೃಷಿ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ದುಡಿದಿದ್ದ ದಿ. ಸುಂದರ ಶೆಟ್ಟಿ ಕಂಪದಕೋಡಿ ಅವರಿಗೆ ಮರಣೋತ್ತರ ಗೌರವಾರ್ಪಣೆಯನ್ನು ನೀಡಲಾಗುವುದು ಎಂದವರು ತಿಳಿಸಿದರು.
ಸಮುದಾಯ ಭವನ ಲೋಕಾರ್ಪಣೆಗೆ ಸಿದ್ಧತೆ: ಈಗಾಗಲೇ ಸುಮಾರು 1 ಕೋಟಿ ರೂಗಳಷ್ಟು ವೆಚ್ಚದ ಸಮುದಾಯ ಭವನ, ಜ್ಞಾನಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಆದಿಯಲ್ಲಿ ಲೋಕಾರ್ಪಣೆಗಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 9, 2020ರಂದು ಶ್ರೀ ಕ್ಷೇತ್ರದಲ್ಲಿ ಜಾತ್ರೋತ್ಸವ ಆರಂಭಗೊಳ್ಳುತ್ತವೆ. ಪ್ರತಿ ತಿಂಗಳು ಸಂಕ್ರಮಣ ಸಂದರ್ಭ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತವೆ ಎಂದು ಕ್ಷೇತ್ರದ ಕುರಿತು ಅವರು ವಿವರಿಸಿದರು. ಸಮುದಾಯ ಭವನ ನಿರ್ಮಾಣದಿಂದ ವಿಶಾಲವಾದ ಪಾರ್ಕಿಂಗ್ ತಳಹದಿಯಲ್ಲಿ ಕಾರ್ಯಕ್ರಮಗಳನ್ನು ನೇತ್ರಾವತಿ ನದಿ ತೀರ ಹಾಗೂ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಏರ್ಪಡಿಸಲು ಭಕ್ತರಿಗೆ ಅನುಕೂಲವಾಗಲಿದೆ, ಹಾಗೂ ಧ್ಯಾನಾಸಕ್ತರಿಗೂ ಇಲ್ಲಿ ನೆಮ್ಮದಿಯ ಪ್ರಶಾಂತ ವಾತಾವರಣ ಒದಗಿಬರಲಿದೆ ಎಂದು ಹೇಳಿದ್ದಾರೆ.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಯಾಗಿ ಹರಿಶ್ಚಂದ್ರ, ಪ್ರಧಾನ ಅರ್ಚಕರಾಗಿ ವೇದಮೂರ್ತಿ ಮಹೇಶ ಭಟ್, ವ್ಯವಸ್ಥಾಪನಾ ಸಮಿತಿಯಲ್ಲಿ ಕೆ.ಪ್ರಭಾಕರ ಶೆಟ್ಟಿ, ಎಸ್. ಗಂಗಾಧರ ಭಟ್ ಕೊಳಕೆ, ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್. ಭಂಡಾರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.
Sb A/c: 520101009065632 IFSC Code: CORP0000200 – ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಈ ಉಳಿತಾಯ ಸಂಖ್ಯೆ, ಪಾಣೆಮಂಗಳೂರು ಕಾರ್ಪೊರೇಶನ್ ಬ್ಯಾಂಕ್ ನಲ್ಲಿದ್ದು, ಧನಸಹಾಯ ನೀಡುವ ಭಕ್ತರು ಇಲ್ಲಿಗೆ ದೇಣಿಗೆ ಕಳುಹಿಸಬೇಕಾಗಿ ಅವರು ವಿನಂತಿಸಿದ್ದಾರೆ.