ಮೂಡುಬಿದಿರೆ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಸಂಸ್ಥಾಪಕ ದೇವಾನಂದ ಭಟ್ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಈ ಬಾರಿ ಆಸ್ಟ್ರೇಲಿಯಾದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.
ಮನೆ ಮನೆ ತಾಳಮದ್ದಳೆ, ಚಾವಡಿ ಕೂಟ, ಮಕ್ಕಳಿಗೆ ಉಚಿತ ಯಕ್ಷ ಶಿಕ್ಷಣ, ಹೀಗೆ ಕಲಾಸೇವೆ, ಪ್ರಸರಣದಲ್ಲಿ ತೊಡಗಿರುವ ಬೆಳುವಾಯಿಯ ಈ ತಂಡ ಕಳೆದ ವರ್ಷ ಅಮೇರಿಕಾ ಪ್ರವಾಸ ಮಾಡಿದ್ದರೆ, ಈ ಬಾರಿ ಕಾಂಗರೂ ನಾಡಿನಲ್ಲಿ ಯಾತ್ರೆ ನಡೆಸಿತು. ವಿಕ್ಟೋರಿಯಾದ ಮೆಲ್ಬೋರ್ನ್ ನಲ್ಲಿ 7, ನ್ಯೂ ಸೌತ್ ವೇಲ್ಸ್ ನ ಸಿಡ್ನಿಯಲ್ಲಿ 3, ಪ.ಆಸ್ಟ್ರೇಲಿಯಾದ ಪರ್ತ್ ನಲ್ಲಿ 2 ಕಡೆ ಗಾನಾರ್ಚನೆ, ಹಾಸ್ಯ, ಮಕ್ಕಳ ಮುಖವರ್ಣಿಕೆ ತರಬೇತಿ, ತಾಳಮದ್ದಳೆ ಸಹಿತ 12 ಕಾರ್ಯಕ್ರಮಗಳನ್ನು ತಂಡ ನೀಡಿತು.
ಸುಧನ್ವಾರ್ಜುನ, ನರಕಾಸುರ ಮೋಕ್ಷ, ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಯಶಸ್ವಿಯಾದವು ಎಂಬುದಕ್ಕೆ ಸೇರಿದ್ದ ಜನಸಂದಣಿ ಸಾಕ್ಷಿಯಾಯಿತು. ಪುತ್ತಿಗೆ ಶ್ರೀ ವೆಂಕಟಕೃಷ್ಣ ವೃಂದಾವನ, ಮೆಲ್ಬೋರ್ನ್ ಕನ್ನಡ ಸಂಘ, ಇಂಡಿಯನ್ ಸೊಸೈಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ 5 ಸಾವಿರಕ್ಕೂ ಮಿಕ್ಕ ಪ್ರೇಕ್ಷಕರ ಮುಂದೆ ನರಕಾಸುರ ಮೋಕ್ಷ ಪ್ರದರ್ಶನ, ಕಲಾವಿದರಿಗೆ ಅಲ್ಲಿನ ಸಚಿವರಿಂದ ಪ್ರಶಸ್ತಿ ಪತ್ರ ದೊರಕಿದ್ದು ಸ್ಮರಣಾರ್ಹ ಎನಿಸಿದವು.
ತೆಂಕಿನ ಜನಮಾನ್ಯ ಕಲಾವಿದರಾದ ಭಾಗವತ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆಗಾರ ಚೈತನ್ಯಕೃಷ್ಣ ಪದ್ಯಾಣ, ಚೆಂಡೆ ದೇವಾನಂದ ಭಟ್, ವೇಷಧಾರಿಗಳಾದ ಡಾ. ಶ್ರುತಕೀರ್ತಿರಾಜ, ಲಕ್ಷ್ಮಣ ಕುಮಾರ ಮರಕಡ, ಅಕ್ಷಯ ಕುಮಾರ್ ಮಾರ್ನಾಡ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು ಎಂದು ಮಂಡಳಿಯ ಸ್ಥಾಪಕಾಧ್ಯಕ್ಷ ಎಂ.ದೇವಾನಂದ ಭಟ್ ತಿಳಿಸಿದ್ದಾರೆ. ಯಕ್ಷಗಾನ ದಿಗ್ವಿಜಯ ಮುಗಿಸಿ ಬಂದ ದಿನ ಕಟೀಲು ಸಾನ್ನಿಧ್ಯದಲ್ಲಿ ಸೇವಾರೂಪದಲ್ಲಿ ಸುಧನ್ವಾರ್ಜುನ ಪ್ರಸಂಗ ಪ್ರದರ್ಶನ ನೀಡಿದರು.
www.bantwalnews.com Editor: Harish Mambady For Advertisements Contact: 9448548127