ಬಂಟ್ವಾಳ: ತನ್ನ ಅವಧಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಚಾರ. ಬಂಟ್ವಾಳ ಕ್ಷೇತ್ರದ ಎಲ್ಲ ಜನರಿಗೂ ಕುಡಿಯುವ ನೀರೊದಗಿಸುವ ಬಹುಗ್ರಾಮ ಕುಡಿಯುವ ಯೋಜನೆ ತನ್ನ ಅವಧಿಯಲ್ಲಿ ಮಂಜೂರುಗೊಂಡು ಕಾರ್ಯರೂಪಕ್ಕೆ ಬರುತ್ತಿದ್ದು, ತನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬುಧವಾರ ಮಾಣಿ ಮತ್ತು ಇತರೆ 51 ಜನವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಪ್ರದೇಶಗಳಿಗೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಜೊತೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
16.46 ಲಕ್ಷ ರೂ ಅಂದಾಜಿನ ಯೋಜನೆ ಟೆಂಡರ್ ಹಂತಕ್ಕೆ ಬಂದಾಗ 19.18 ಕೋಟಿ ರೂ ಆಗಿತ್ತು. 51 ಜನವಸತಿ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಪಂ ವ್ಯಾಪ್ತಿಗೆ ಇದು ಅನುಕೂಲವಾಗುತ್ತದೆ. 25,215 ಜನರಿಗೆ ಪ್ರಯೋಜನವಾಗುವ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನಾ ಸಮಾರಂಭ ನಡೆಯುವುದು ಸಂತೋಷದ ವಿಚಾರ, ಈ ಯೋಜನೆ ಅನುಷ್ಠಾನ ಸಂದರ್ಭ ಅದರ ಹಿಂದೆ ಬೆನ್ನು ಹಿಡಿದು ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಸಿಕೊಟ್ಟ ತೃಪ್ತಿ ತನಗಿದೆ. ಜಿಪಂ, ತಾಪಂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕರೋಪಾಡಿ, ಸಂಗಬೆಟ್ಟು ಯೋಜನೆ ಅನುಷ್ಠಾನಗೊಂಡಿದೆ, ಬಿಟ್ಟುಹೋದ ತಾಲೂಕಿನ ಇತರೆ ಪ್ರದೇಶಗಳನ್ನು ಮುಡಿಪು, ಅಳಿಕೆ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತದೆ ಎಂದ ಅವರು, ಎಲ್ಲ 5 ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿರುವುದು ಸಂತಸದ ವಿಷಯ ಎಂದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಸ್ಥಳೀಯ ಪಂಚಾಯತಿ ಅಧ್ಯಕ್ಷ, ಸದಸ್ಯರು, ಮುಖಂಡರು ಹಾಜರಿದ್ದರು.