ನಿಮ್ಮ ಧ್ವನಿ

ಬತ್ತಿದ ಬೇಸಾಯ, ವಾಣಿಜ್ಯ ಕೃಷಿಗೂ ಹೊಡೆತ, ಇತಿಹಾಸದ ಪುಟಕ್ಕೆ ಗದ್ದೆಗಳು ಸೇರುತ್ತಾ?

ಚಿತ್ರ: ಪ್ರಾತಿನಿಧಿಕ

  • ಲೇಖನ: ದಿನೇಶ್ ಮುರುವ

ಅಂದು…

ಕೊಟ್ಟಿಗೆ ಯಲ್ಲಿ ಮೈತುಂಬಿ ನಿಂತ ಎತ್ತು, ಕೋಣಗಳು, ಕಣ್ಣಂಚಿಗೂ ಸಿಲುಕದಷ್ಟು ವಿಶಾಲ ಹೊಲಗಳು ನೇಸರ ಅಗಮನದೊಂದಿಗೆ ಬೆನ್ನಿಗೊಂದು ಹೊದಿಕೆ( ಪನೋಳಿ – ತುಳುವಿನಲ್ಲಿ) ಹಾಕುತ್ತಾ ಹೊಯ್ ಹೊಯ್ ಎನ್ನುತ್ತಾ ಉತ್ಸಾಹದಿಂದ ಬೇವರು ಸುರಿಸುವ ಕಾಯಕ ಯೋಗಿ. ನೇಜಿ( ಭತ್ತದ ಸಸಿ) ನೆಡುವ  ಹೆಂಗಸರ ಪಾಡ್ತನ, ಮಳೆಗೊಂದು ,ಒಂದೊಳ್ಳೆ ಫಸಲಿಗೊಂದು ಮನೆ ದೇವರ ಮೇಲೆ ಹರಕೆ . ನರ್ತೆ ಹೆಕ್ಕುತ್ತಾ, ಕೆಸಸರಲ್ಲಿ ಬಿದ್ದು ಹೋಯ್ದಾಡುವ ಮಕ್ಕಳ ದೃಶ್ಯ

ಇಂದು…

ವಾಣಿಜ್ಯ ಕೃಷಿಯನ್ನು ರೈತ ನೆಚ್ಚಿದ್ದಾನೆ. ಹಿಂದಿರುಗಿ ಬಾರದಷ್ಟು ದೂರ ಹೋಗಿದ್ದಾನೆ. ಅಕ್ಕಿ ಮುಡಿಗಳ ಜಾಗವನ್ನು ಅಡಿಕೆ ಮೂಟೆಗಳು ಆಕ್ರಮಿಸಿಕೊಂಡಿದೆ  ಭತ್ತದ ಒಣ ಹುಲ್ಲಿನ ರಾಶಿ ಜಾಗವನ್ನು ಅಡಿಕೆ ಸೋಲಾರ್ ಟೆಂಟ್ ಗಳು ಅಕ್ರಮಿಸಿ ಕೊಂಡಿವೆ.(ಅಧುನಿಕ ಪದ್ಧತಿಯಲ್ಲಿ ಅಡಿಕೆ ಒಣಗಿಸುವ ವಿಧಾನ) ಅಲ್ಲೊಂದು ಇಲ್ಲೊಂದು ಹೊಲ-ಗದ್ದೆಗಳು ಕಂಡರೂ ಅದು ಬಂಜರು ಬಿದ್ದಿವೆ.  ಭವಿಷ್ಯದಲ್ಲಿ ಈ ಅಡಕೆಯೂ  ಬಲಿಯಾಗುತ್ತದೆ ಒಂದೊಳ್ಳೆ ಕಣ್ಣು ಕುಕ್ಕುವ ನಿವೇಶನವಾಗಿಯೂ ಗದ್ದೆ ಪರಿವರ್ತನೆ ಹೊಂದಬಹುದು.

ಯಾಕಾಗಿ?

ಕೂಲಿ ಕಾರ್ಮಿಕರ ಕೊರತೆ;  ಸುಲಭ ಮತ್ತು ಲಾಭದಾಯಕ ಕೃಷಿಗಾಗಿ ಎತ್ತು, ಕೋಣಗಳ ಬದಲಾಗಿ ಆಧುನಿಕ ತಂತ್ರಜ್ಞಾನ ಮೊರೆ ಹೋದರೂ ಕಾರ್ಮಿಕರ ಕೊರತೆ ತಪ್ಪಲಿಲ್ಲ.  ರೈತ ತನ್ನಂತೆ ಮಕ್ಕಳೂ ಹೊಲದಲ್ಲಿ ಬೆವರು ಸುರಿಸಲು ಇಚ್ಛಿಸಲಿಲ್ಲ. ವೃತ್ತಿಪರ ವಿದ್ಯಾಭ್ಯಾಸ ಕೊಡಿಸಿ ನಗರಕ್ಕೆ ಕಳುಹಿಸಿದ, ಮಕ್ಕಳು ಅಲ್ಲೇ ಭದ್ರವಾಗಿ ನೆಲೆಯೂರಿ   ಕೃಷಿಯತ್ತ ತಲೆಹಾಕಿಯೂ  ಮಲಗಲಿಲ್ಲ,  ದುಬಾರಿ ಕೂಲಿಯನ್ನು ಹೊಂದಿಸಲಾಗದೆ ಅನಿವಾರ್ಯ ವಾಗಿ ಭತ್ತ ಬೆಳೆಗಾರ ವಾಣಿಜ್ಯ ಕೃಷಿಯತ್ತ ಹೋರಟ. ಭತ್ತ ಕೃಷಿಕನ  ಬೆಳೆಗೆ ಬೆಲೆ  ಸಿಗಲಿಲ್ಲ – ಸರ್ಕಾರ ಗಳೂ ತಮ್ಮ ಮತ ಬ್ಯಾಂಕ್ ಗೆ ಬೇಕಾಗಿ ಉಣ್ಣುವ ಹೊಟ್ಟೆಗಳನ್ನು ನಂಬಿತೇ ವಿನಃ , ವರ್ಷವಿಡೀ ಬೆವರು ಸುರಿಸಿದ ರೈತನನ್ನು ಮರೆತುಬಿಟ್ಟಿತು.  ಸಿಕ್ಕಿದ್ದು ಬಿಡಿಗಾಸು, ಮಧ್ಯವರ್ತಿ ಗಳ ಕಾಟ ಮಾತ್ರ. ಆತನಲ್ಲಿ ಭತ್ತವನೆ ನಂಬಿ  ಕುಟುಂಬವನ್ನು ಸಾಕುವ ಸಣ್ಣ ಧೈರ್ಯವೂ, ಹುಮ್ಮಸ್ಸು ಉಳಿಯಲಿಲ್ಲ , ಅವನನ್ನೇ ನಂಬಿದ್ದ ಎತ್ತು ಕೋಣಗಳನ್ನು ಸಾಕಲು ಸಾಕಾಗಲಿಲ್ಲ. ಅದರ ಬದಲಿಗೆ ಉತ್ತಮ ಧರ್ಜೆ ಹಸು ಗಳಿಗೆ ಮೊರೆ ಹೋದ.

ರೈತ ತಲುಪದ ಸರಕಾರಗಳು, ಸರ್ಕಾರದ ಯೋಜನೆಗಳು. ಸರ್ಕಾರಗಳು ಕೂಲಿ ಕೊರತೆಯ ನಿವಾರಣೆಗೆ ತಂತ್ರಜ್ಞಾನ ಮೊರೆ ಹೋಗಲು ಸೂಚಿಸಿ ಸಬ್ಸಿಡಿಯನ್ನು ನೀಡ ಹೊರಟರೂ ನಮ್ಮ ಜಿಲ್ಲೆಗೆ ಪರಿಣಾಮಕಾರಿಯೆನಿಸಲಿಲ್ಲ ಬೀಳಲಿಲ್ಲ, ಅಗ್ಗು,ತಗ್ಗು ಭೌಗೋಳಿಕ ಹಿನ್ನಲೆಯಲ್ಲಿ ರುವ ಶೇ.90 ರಷ್ಟು ಹೊಲಗಳಿಗೆ ಆಧುನಿಕ ತಂತ್ರಜ್ಞಾನ ಯಂತ್ರಗಳೂ ಇಳಿಯಲೇ ಇಲ್ಲ, ಇದರಂತೆ  ಕೃಷಿ ಇಲಾಖೆಯ ಆಧುನಿಕ ಯಂತ್ರಗಳನ್ನು ಸಬ್ಸಿಡಿ ರೂಪದಲ್ಲಿ ಕೃಷಿ ಭೂಮಿಗೆ ಇಳಿಸುವ ಯೋಜನೆಯು ಫಲಕಾರಿಯಾಗದೆ ಉಳಿಯಿತು.  ರೈತ  ನೀರಾವರಿಗಾಗಿ ದುಬಾರಿ ವೆಚ್ಚ ತೆತ್ತು ಬೋರ್ ವೈಲ್ ಗಳನ್ನು ಕೊರೆಸಿದ. ನೀರಿನ  ಲಭ್ಯತೆ ಕಂಡರೂ ಬತ್ತದಿಂದ ವಾಣಿಜ್ಯ ಕೃಷಿ ಯತ್ತ ಹೊರಟ. ಒಲ್ಲದ ಮನಸ್ಸಿನಿಂದ ಸಿಹಿಕನಸು ಎಂಬಂತೆ ಮರೆತೇ ಬಿಟ್ಟ.

ಮಣ್ಣಿನ ನಂಟು ಹೋಯಿತು:

ಪುದ್ವಾರ್ ಗೋಸ್ಕರ ದೇವಸ್ಥಾನಕ್ಕೆ ಮೊರೆ ಹೋಗಿ ಅಲ್ಲಿಂದಲೇ ಪೈರುಗಳು ತಂದು ಮನೆಯಲ್ಲಿ ಕಟ್ಟಿದ (ಇದು ಹೊಸ ಬೇಳೆಯನ್ನು ದೇವರಿಗೆ ಅರ್ಪಿಸಿ ಮನೆಮಂದಿಯೆಲ್ಲ ಒಟ್ಟಾಗಿ ಕೂತು ಸಂಭ್ರಮಿಸುವ ದಿನ )  ಭತ್ತ ಬೇಸಾಯ ಕೇವಲ ಒಂದು ಕೃಷಿ ಆಗಿರಲ್ಲಿಲ್ಲ ಅದೊಂದು ಜನಪದ ಕೌಶಲ್ಯ , ಅದೆಷ್ಟೋ ಮಂದಿಯ ಅಚ್ಚಳಿಯದ ಬಾಲ್ಯದ ನೆನಪು ಜನಪದ ಸಾಹಿತ್ಯ, ಮಣ್ಣಿನ ಜೊತೆಗಿನ ಸಂಪರ್ಕವಾಗಿತ್ತು,

ಕೆಸರುಗದ್ದೆಯಲ್ಲಿ:

ನಾವಿಂದು ವರ್ಷಕ್ಕೊಮ್ಮೆ ಜಾತಿ, ಧರ್ಮ, ಸಂಘಟನೆ ಹೆಸರಿನಲ್ಲಿ ಆಟಿ ಕೂಟ,ಕೆಸರು ಗದ್ದೆ ಕೂಟ ಆರಂಭಿಸಿ  ಬೊಬ್ಬಿರುಯುತ್ತೇವೆ. ಡಿಜೆ ಹಾಕಿ ಕುಣಿಯುತ್ತೇವೆ. ಸಂಘಕರು ಮರುವರ್ಷ ಮತ್ತೋಮ್ಮೆ ಅದ್ದೂರಿಯಾಗಿ ಆಚರಿಸುವ  ಮನದಲ್ಲೇ ಯೋಜನೆಯನ್ನು ಹೂಡುತ್ತಿರುತ್ತಾರೆ. ವಸ್ತುಪ್ರದರ್ಶನ ದಲ್ಲೂ 90ರ ದಶಕದ ರೈತನ ಪ್ರತಿಛಾಯೆ ಸಾಮಾನ್ಯವಾಗುತ್ತಿದೆ. ಸ್ವತಃ ಮಾಜಿ ಭತ್ತ ಬೇಸಾಯಗಾರನೇ ಇವನ್ನೆಲ್ಲ ಕಂಡು ಬೆರಗಾಗುತ್ತಾನೆ. ಈ  ಅಳಿದುಳಿದ ಭತ್ತ ಬೇಸಾಯವನ್ನು ರೈತ ಉಳಿಸುವನೋ, ಜನಪರ ಸಂಘಟನೆ ಉಳಿಸುತ್ತಾರೋ, ಸರ್ಕಾರಗಳು ಭತ್ತ ಉತ್ಪಾಕರ ಸೂಕ್ತ ಬೆಲೆ ನೀಡಿ ಬೆನ್ನು ತಟ್ಟುತ್ತೋ ನನಗಂತೂ ತಿಳಿದಿಲ್ಲ.  ಆ ರೈತರಂತೂ ಭತ್ತ ಬೇಸಾಯವೊಂದು ಕಬ್ಬಿಣದ ಕಡಲೆಯಂತಿದ್ದರೂ ನಮ್ಮೆಲ್ಲ ನಾಗರಿಕತೆಗಳ, ಸಂಸ್ಕೃತಿಯ ಜೊತೆಗೆ ಉಳಿಸಿ ಬೆಳೆಸಿದ್ದ . ಅವನೊಂದಿಗೆ ಅದು ಇತಿಹಾಸ ಪುಟ ಸೇರಿಬಿಟ್ಟಿತು ಜೊತೆಗೆ ನಮ್ಮ ಬಾಲ್ಯವೂ..

  • ಲೇಖನ – ದಿನೇಶ್ ಮುರುವ

www.bantwalnews.com Editor: Harish Mambady For Advertisements Contact: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ