ದೀಪಾವಳಿ ಸಂಭ್ರಮವನ್ನು ಮನೆಗಳಲ್ಲಿ ಆಚರಿಸುವುದು ಮಾಮೂಲು. ಆದರೆ ಜೇಸಿ ಬಂಟ್ವಾಳ ಸದಸ್ಯರು ಬಿ.ಸಿ.ರೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಬ್ಬ ಆಚರಿಸಿ ಸಂಭ್ರಮಪಟ್ಟರು. ಮಕ್ಕಳ ಖುಷಿಯಲ್ಲಿ ತಾವು ಭಾಗೀದಾರರಾದರು.
ವರ್ಷಂಪ್ರತಿಯಂತೆ ವಿದ್ಯಾರ್ಥಿಗಳಿಗಾಗಿ ನಡೆದ ದೀಪಾವಳಿ ಆಚರಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಿ.ಸಿ.ರೋಡು ವಸತಿ ಶಾಲೆ (ಆಶ್ರಮ ಶಾಲೆ) ಹಾಗೂ ಮೊಡಂಕಾಪು ವಸತಿ ಶಾಲೆಯ ಮಕ್ಕಳು ಖುಷಿ ಪಟ್ಟರು. ಸಾಲು ಸಾಲು ಹಣತೆ, ಮೊಂಬತ್ತಿಯ ಬೆಳಕು, ಕೈಯಲ್ಲಿ ನಕ್ಷತ್ರ ಕಡ್ಡಿ ಹಿಡಿದು ದೀಪದ ಬೆಳಕಿನಲಿ ಮಕ್ಕಳು ಓಡಾಡಿದರು.
ಸಂಜೆಯಾಗುತ್ತಿದ್ದಂತೆಯೇ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಿದ್ದರಾಗಿದ್ದ ವಸತಿ ಶಾಲೆಯ ವಿದ್ಯಾರ್ಥಿಗಳು ಒಳ ಆವರಣದಲ್ಲಿ ದೀಪ, ಹಣತೆ, ಮೊಂಬತ್ತಿ ಬೆಳಗಿದರು. ನಕ್ಷತ್ರ ಕಡ್ಡಿಯನ್ನು ಹಚ್ಚಿ ಮನಸೋ ಇಚ್ಛೆ ಖುಷಿ ಪಟ್ಟರು. ಹೂ ಕುಂಡ, ಚಿನಕರುಳಿ ಜೊತೆ ಕುಣಿದು ಕುಪ್ಪಳಿಸಿದರು. ದೀಪಾವಳಿಯ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮ ಪಟ್ಟರು.
ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೇರಾ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ನಿಯೋಜಿತ ಅಧ್ಯಕ್ಷ ಸದಾನಂದ ಬಂಗೇರ, ಕೋಶಾಧಿಕಾರಿ ಗಣೇಶ್ ಕುಲಾಲ್ ದುಗನಕೋಡಿ, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಸುವರ್ಣ, ಸಂತೋಷ್ ಜೈನ್, ಡಾ. ಬಾಲಕೃಷ್ಣ ಕುಮಾರ್, ಸಂದೀಪ್ ಸಾಲ್ಯಾನ್, ನಿಕಟಪೂರ್ವ ಕಾರ್ಯದರ್ಶಿ ಉಮೇಶ್ ಮೂಲ್ಯ, ಸದಸ್ಯರಾದ ದೀಪಕ್ ಸಾಲ್ಯಾನ್, ಪ್ರಕಾಶ್ ಕೈಕಂಬ, ರೋಟರಿ ಕ್ಲಬ್ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು. ವಸತಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಸಾದ್ ಕುಮಾರ್, ಪತ್ರಕರ್ತರಾದ ಹರೀಶ್ ಮಾಂಬಾಡಿ, ಕಿರಣ್ ಸರಪಾಡಿ, ಮೌನೇಶ್ ವಿಶ್ವಕರ್ಮ, ರಹಿಮಾನ್ ತಲಪಾಡಿ ವಿದ್ಯಾರ್ಥಿಗಳ ಜೊತೆ ದೀಪಾವಳಿ ಆಚರಿಸಿದರು.