www.bantwalnews.com Editor: Harish Mambady
ಚಂಡಮಾರುತದ ಛಾಯೆ, ವಾಯುಭಾರ ಕುಸಿತದ ಪರಿಣಾಮ, ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ. ನಾಳೆ (ಅ.26ರಂದು) ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಸಮುದ್ರದಲ್ಲಿ ಚಂಡಮಾರುತ ಸನ್ನಿವೇಶವು ಉದ್ಭವಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು 26ರಂದು ಎಲ್ಲ ಅಂಗನವಾಡಿ ಕೇಂದ್ರ, ಸರಕಾರಿ ಅನುದಾನಿತ, ಖಾಸಗಿ ವಿದ್ಯಾಸಂಸ್ಥೆ (ಪಪೂ ಕಾಲೇಜುವರೆಗೆ) ರಜೆ ಘೋಷಿಸಿದೆ.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:
ಜಿಲ್ಲೆಯ ಹಲವೆಡೆ ಹಾನಿ:
ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಲವೆಡೆ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಒಟ್ಟು 12ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಮೂವರು ಮನೆಗಳಿಗೆ ತೀವ್ರ ಹಾನಿ, 9 ಮನೆಗಳಿಗೆ ಭಾಗಶಃ ಹಾನಿ, ಮರ ಬಿದ್ದು ರಸ್ತೆಗಳಿಗೆ ಹಾನಿ, ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿತದ ಅವಘಡಗಳು ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಳಿಗೆ ಮೂರ್ಜೆ-ವಾಮದಪದವು ರಸ್ತೆಯ ಕಲಾಬಾಗಿಲುನಲ್ಲಿ ಆಲದಮರವೊಂದು ರಸ್ತೆಗಡ್ಡವಾಗಿ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತು. ಇರ್ವತ್ತೂರು ಗ್ರಾಪಂ, ಅರಣ್ಯ ಇಲಾಖೆ ವೇಣೂರು ವಲಯ, ಪುಂಜಾಲಕಟ್ಟೆ ಆರಕ್ಷಕ ಠಾಣೆ, ಮೆಸ್ಕಾಂ ವಗ್ಗ ಶಾಖೆ ಸಹಕಾರದಲ್ಲಿ ಮರವನ್ನು ತೆರವುಗೊಳಿಸಲಾಯಿತು.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪ್ಪಾಡಿ ಪಳಿಕೆ ಎಂಬಲ್ಲಿ ವಾಸವಿರುವ ಚೋಮು ಎಂಬ ಮಹಿಳೆಯ ಮನೆಯು ಸಂಪೂರ್ಣವಾಗಿ ನಾಶವಾಗಿದ್ದು, ಈ ಬಡವರ ಬದುಕಿನಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ.