ಬಂಟ್ವಾಳ: ಮಕ್ಕಳಿಗೆ ಒಳ್ಳೆಯ ಪರಿಸರ ಕಲ್ಪಿಸಿಕೊಡುವುದೇ ಪ್ರಾಥಮಿಕ ಶಿಕ್ಷಣದ ಗುರಿ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ನಿರ್ಮಿಸಿಕೊಡಬೇಕಾಗಿ ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಬಂಟ್ವಾಳ ಅವರು ಹೇಳಿದರು.
ಕಾವಳಮೂಡೂರು, ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಮಕ್ಕಳನ್ನು ಶೈಕ್ಷಣಿಕ ವಿಕಸನಕ್ಕೆ ಪೂರಕವಾಗಿ ಬೆಳೆಸಬೇಕಾಗಿದೆ. ಸಮುದಾಯ ಶೈಕ್ಷಣಿಕ ಜಾಗೃತಿಗೊಂಡಾಗ ಮಾತ್ರ ಮೌಲ್ಯಾಧಾರಿತ ಶಿಕ್ಷಣ ಗುರಿ ಮುಟ್ಟಲು ಸಾಧ್ಯ ಎಂದವರು ತಿಳಿಸಿದರು.
ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳು, ಎಸ್.ಡಿ.ಎಸ್.ಡಿ.ಯ ಕಾರ್ಯವೈಖರಿ, ಶಿಕ್ಷಕರ ಹಾಗೂ ಪೋಷಕರ ಸಹಭಾಗಿತ್ವ ಮಾದರಿಯಾಗಿದ್ದು, ಕೇಂದ್ರದ ವತಿಯಿಂದ ಗುರುತಿಸಲಾಗುವುದಾಗಿ ಫಾರೂಕ್ ಬಂಟ್ವಾಳ ಪ್ರತಿಕ್ರಿಯಿಸಿದರು.
ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಾಧಾರಿತ ಕಿರು ನಾಟಕವನ್ನು ವಿದ್ಯಾರ್ಥಿ ಕಲಾವಿದರ ತಂಡ ಪ್ರದರ್ಶಿಸಿತು. ಪಡಿ ಸಂಸ್ಥೆಯ ಸಂಯೋಜಕಿ ರಾಜೇಶ್ವರಿ ಅವರು ನಾಟಕ ಪ್ರದರ್ಶನವನ್ನು ಸಂಯೋಜಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ರಾಜುಗೋಪಾಲ್, ಯೋಗೀಶ್ ಆಚಾರ್ಯ, ಲಕ್ಷ್ಮಣ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಮೋಹನ ಆಚಾರ್ಯ, ಸತೀಶ್ ಪಡಂತರಬೆಟ್ಟು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಉಮಾ ಸ್ವಾಗತಿಸಿ, ಸಹ ಶಿಕ್ಷಕಿ ರಮ್ಯಾ ಪ್ರಭು ವಂದಿಸಿದರು. ಶಿಕ್ಷಕ ವಿ. ಚಂದಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.