ಸಂವಿಧಾನ ಬದ್ದ ಹಕ್ಕುಗಳ ಹೋರಾಟಕ್ಕೆ ಯುವಜನತೆ ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕರೆ ನೀಡಿದರು.
ಡಿ.ವೈ.ಎಫ್.ಐ ವತಿಯಿಂದ ಬಿ.ಸಿ.ರೋಡಿನ ರಿಕ್ಷಾಭವನ ದಲ್ಲಿ ನಡೆದ ಬಂಟ್ವಾಳ ತಾಲೂಕು ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ ಮತ ಬೇಧವಿಲ್ಲದೆ ದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ದಾರಿ ತಪ್ಪಿದ ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿ ಡಿ.ವೈ.ಎಫ್.ಐ ಗೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಜನತೆಗೆ ಜಾಗ್ರತಿ ಮೂಡಿಸಿ ಅದರ ವಿರುದ್ದವಾಗಿ ಹೋರಾಟ ನಡೆಸಲು ಯುವ ಜನತೆ ಸಜ್ಜಾಗಬೇಕಾಗಿದೆ ಎಂದರು.
ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಮಾಜಿ ಕಾರ್ಯದರ್ಶಿ ಉದಯ ಕುಮಾರ್ ಬಂಟ್ವಾಳ ಅದ್ಯಕ್ಷತೆ ವಹಿಸಿದ್ದರು. ಮಾಜಿ ಅದ್ಯಕ್ಷ ಜನಾರ್ದನ ಕುಲಾಲ್ ಮಾತನಾಡಿದರು. ಪ್ರಮುಖರಾದ ಎ.ರಾಮಣ್ಣ ವಿಟ್ಲ, ಲೋಲಾಕ್ಷ ಸುರೇಂದ್ರ ಕೋಟ್ಯಾನ್ ಬಂಟ್ವಾಳ, ಸಾದಿಕ್ ಬಂಟ್ವಾಳ, ಶೌಕತ್ ಅಲಿ ಖಾನ್, ದೇವದಾಸ ಕುಲಾಲ್, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಗಝ್ಝಾಲಿ, ಸಫ್ವಾನ್ ಎನ್.ಕೆ. ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ತುಳಸೀದಾಸ್ ಸ್ವಾಗತಿಸಿ, ವಂದಿಸಿದರು. ಎಂ.ಆರ್.ಪಿ.ಎಲ್ ನಲ್ಲಿ ಖಾಲಿ ಇರುವ 233 ಉದ್ಯೋಗಗಳ ಪೈಕಿ ಶೇಕಡಾ 80 ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡಬೇಕು. ನಿವೇಶನ ರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಬೇಕು ಹಾಗೂ ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಈ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸುವುದು ಹಾಗೂ ಸೂಕ್ತ ಹೋರಾಟಕೈಗೊಳ್ಳುವುದಾಗಿ ನಿರ್ಣಯ ಕೈಗೊಳ್ಳಲಾಯಿತು.