ಕವರ್ ಸ್ಟೋರಿ

ವಾಕಿಂಗ್ ಹೋಗುತ್ತೀರಾ ಹುಷಾರು…!! ಬೀದಿನಾಯಿಗಳಿವೆ ಎಚ್ಚರಿಕೆ

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು

ಬಿ.ಸಿ.ರೋಡ್ ನ ಬೀದಿಗಳಲ್ಲಿ ನಡೆದುಕೊಂಡು ಹೋಗುವವರೇ ಹುಷಾರು.. ಬೀದಿನಾಯಿಗಳು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. ಶ್ವಾನಪ್ರಿಯರೇ ಇಲ್ಲಿ ನೋಡಿ, ನಿಮ್ಮ ನಾಯಿ ಮೇಲಿನ ಪ್ರೀತಿಯನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ದಾರಿಯಲ್ಲಿ ನಿಮ್ಮ ಮನೆಯಲ್ಲಿ ಅಳಿದುಳಿದ ಬಿಸ್ಕೆಟ್, ತಿಂಡಿ ತಿನಿಸುಗಳನ್ನು ಬೀದಿನಾಯಿಗಳನ್ನು ಕರೆದು ಹಾಕುವ ಪರಿಪಾಠ ಇಟ್ಟುಕೊಳ್ಳುತ್ತೀರಾ, ನೀವು ಒಂದು ದಿನ ಬಾರದೇ ಇದ್ದರೆ, ನಿಮ್ಮಂತೆಯೇ ಇರುವ ಉಳಿದವರನ್ನು ಹಿಂಬಾಲಿಸುತ್ತವೆ ಬೀದಿನಾಯಿಗಳು. ಸಣ್ಣ ಮಕ್ಕಳನ್ನೂ ಬಿಡದೆ ಅವರ ಕೈಯಲ್ಲಿರುವ ಬ್ಯಾಗುಗಳನ್ನು ಸೆಳೆಯಲು ನೋಡುತ್ತಿವೆ.

ಹೀಗೆಂದು ಬಿ.ಸಿ.ರೋಡಿನಲ್ಲಿ ನಡೆದುಕೊಂಡು ಹೋಗುವವರು, ವಿಶೇಷವಾಗಿ ಬೆಳಗ್ಗಿನ ವಾಕ್ ಗೆ ತೆರಳುವವರು ಹೇಳುತ್ತಿದ್ದಾರೆ. ಪಟ್ಟಣದ ಆಯ್ದ ಕೆಲವೆಡೆ ಬೀದಿನಾಯಿಗಳ ಕಾಟ ಜಾಸ್ತಿಯಾಗುತ್ತಿದೆ. ಕೆಲವು ಮನೆಗಳಲ್ಲಿ ಅಡುಗೆ ತಯಾರಿಸಿ ಅದನ್ನು ರಸ್ತೆಗೆ ಎಸೆಯುವ ಪರಿಪಾಠ ಇದ್ದು ಅಲ್ಲೇ ಬೀದಿನಾಯಿಗಳು ಕಾದು ಕುಳಿತರೆ, ಇನ್ನು ಕೆಲವು ಮಾಂಸಾಹಾರಿ ಹೋಟೆಲ್ ಗಳ ಸುತ್ತಮುತ್ತ ಠಳಾಯಿಸುತ್ತವೆ. ಕೆಲವು ಶ್ವಾನಪ್ರೇಮಿಗಳು ತಾವು ನಡೆದುಕೊಂಡು ಬರುವಾಗ ತಿಂಡಿ, ತಿನಿಸುಗಳ ಪೊಟ್ಟಣವನ್ನು ಹಿಡಿದುಕೊಂಡು ಬಂದು ಬೀದಿನಾಯಿಗಳತ್ತ ಎಸೆಯುತ್ತಾರೆ. ಕೆಲವರು ಬೈಕಿನಲ್ಲಿ ಬಂದು ಬೀದಿನಾಯಿಗಳಿಗೆ ಆಹಾರ ಎಸೆಯುವ ಮುನ್ನ ಅವುಗಳು ತಮ್ಮತ್ತ ಹಿಂಬಾಲಿಸಿಕೊಂಡು ಬರುವಂತೆ ಆಟವಾಡುತ್ತಾರೆ. ಈ ಎಲ್ಲ ಪ್ರಕ್ರಿಯೆಗಳಿಂದ ಬೀದಿನಾಯಿಗಳು ಬಿ.ಸಿ.ರೋಡಿನ ಕೆಲ ವಸತಿ ಬಡಾವಣೆಗಳಲ್ಲಿ ಗಣನೀಯವಾಗಿ ಸಂಖ್ಯೆ ವೃದ್ಧಿಸಿವೆ. ವಿಶೇಷವಾಗಿ ಬಿ.ಸಿ.ರೋಡಿನಿಂದ ಕೈಕುಂಜೆಗೆ ತೆರಳುವ ರಸ್ತೆ, ರೈಲ್ವೆ ಸ್ಟೇಶನ್ ಬಳಿ ಬೀದಿನಾಯಿಗಳ ಕಾಟ ಮಿತಿಮೀರಿದೆ.

ಬೆಳಗ್ಗಿನ ಜಾವ ಕಾರಿನಲ್ಲೋ, ವಾಕಿಂಗ್ ಬರುತ್ತಲೋ ಪ್ಲಾಸ್ಟಿಕ್ ಅನ್ನು ಗಂಟುಕಟ್ಟಿಕೊಂಡು ಬಂದು ರಸ್ತೆಯ ಮೂಲೆಯಲ್ಲಿ ಎಸೆದು ಹೋಗುತ್ತಾರೆ. ಅವಕ್ಕೇ ಕಾದಿರುವಂತೆ ನಾಲ್ಕೈದು ನಾಯಿಗಳು ಮುಗಿಬೀಳುತ್ತವೆ. ಪ್ಲಾಸ್ಟಿಕ್ ಸಮೇತ ಅವನ್ನು ತಿನ್ನುತ್ತವೆ. ಪರಿಣಾಮ ಇಷ್ಟೇ. ಯಾರಾದರೂ ಅದೇ ಜಾಗದಲ್ಲಿ ನಡೆದುಕೊಂಡು ಹೋಗುತ್ತಾರೋ, ಅವರನ್ನು ನಾಯಿಗಳು ಹಿಂಬಾಲಿಸುತ್ತವೆ. ಅವರು ತ್ಯಾಜ್ಯದ ತೊಟ್ಟೆಯನ್ನು ಎಸೆಯುತ್ತಾರೋ ಎಂಬುದನ್ನು ಗಮನಿಸುತ್ತವೆ. ಎಸೆಯದಿದ್ದರೆ ಅವರ ಮೇಲೆರಗಲು ಬರುತ್ತವೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್ ಸಹಿತ ಕೆಲ ಕಡೆಗಳಲ್ಲಿ ದುಷ್ಪರಿಣಾಮಗಳ ಅರಿವಿದ್ದರೂ ಬದಲೀ ವ್ಯವಸ್ಥೆ ಇಲ್ಲ ಎಂಬ ನೆಪದಿಂದ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಈಗ ಮನುಷ್ಯನಿಗೆ ಭಸ್ಮಾಸುರನಾಗಿ ಕಾಡುತ್ತಿದೆ. ಕೆಲವು ನಿರ್ದಿಷ್ಟ ಬಳಕೆಗಳಿಗೆ ಪರ್ಯಾಯ ವ್ಯವಸ್ಥೆಯೂ ಇಲ್ಲದೇ ಇರುವ ಕಾರಣ ಪ್ಲಾಸ್ಟಿಕ್ ಕೈಚೀಲಗಳು ಉಪಯೋಗಿಸಲ್ಪಡುತ್ತಿದ್ದು, ಅವನ್ನು ಕಸ ಸಂಗ್ರಹಣಾ ವಾಹನಗಳಿಗೆ ನೀಡುವ ಬದಲು ಕಂಡಕಂಡಲ್ಲಿ ಎಸೆಯುವ ಕಾರಣ, ನಾಯಿಗಳು ಮುಗಿಬೀಳಲು ಕಾರಣವಾಗಿವೆ.

ಬಂಟ್ವಾಳ ಪುರಸಭೆಯ ತ್ಯಾಜ್ಯ ಅಲ್ಲಲ್ಲಿ ಡಂಪ್ ಆಗುತ್ತದೆ. ಇಲ್ಲಿ ಹೇರಳವಾದ ಕಸಕಡ್ಡಿಗಳು, ಅದರ ಜೊತೆಗೆ ಮಾಂಸದ ಚೂರುಗಳೂ ಬೀಳುತ್ತವೆ. ಇವು ನಾಯಿಗಳನ್ನು ಆಕರ್ಷಿಸುತ್ತವೆ. ಜಾಗ ಸ್ವಚ್ಛವಾಗಿದ್ದರೆ ನಾಯಿಗಳು ಅಲ್ಲಿ ತಲೆಯೇ ಹಾಕುವುದಿಲ್ಲ. ಜನರು ದಿನಬಳಕೆಯಲ್ಲಿ ಪ್ಲಾಸ್ಟಿಕ್ ಕಡಿಮೆ ಮಾಡಿದರೆ ಹಾಗೂ ಪುರಸಭೆ ತ್ಯಾಜ್ಯವಿಲೇವಾರಿಯನ್ನೂ ಸಶಕ್ತವಾಗಿ ನಡೆಸಿದರೆ, ಇಂಥ ಸನ್ನಿವೇಶ ಬರುವುದಿಲ್ಲ.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts