ಬೆಂಗಳೂರಿನ ಶ್ರೀ ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂನ ಶ್ರೀ ಶಾರದಾ ಪೀಠ ವತಿಯಿಂದ ಅಕ್ಟೋಬರ್ 8ರಂದು ನಡೆಯುವ ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಆಸ್ಥಾನ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.
ನಾನಾ ಕ್ಷೇತ್ರಗಳಲ್ಲಿ ದುಡಿದ ಒಟ್ಟ ಐವರು ಮಹನೀಯರಿಗೆ ಈ ಪ್ರಶಸ್ತಿ ದೊರಕಲಿದ್ದು, ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಕಲಾವಿದರೊಬ್ಬರಿಗೆ ಅವನಿ ಶೃಂಗೇರಿ ಪೀಠದಿಂದ ಇದೇ ಮೊದಲ ಬಾರಿಗೆ ಆಸ್ಥಾನ ವಿದ್ವಾನ್ ಬಿರುದು ನೀಡಲಾಗುತ್ತಿದೆ ಎಂದು ಮಠದ ಭಕ್ತವೃಂದದವರಾದ ಶರವೂರು ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀಪುರಂನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಅವನಿ ಶ್ರೀ ಶಾರದಾಪೀಠಂ ಮಠವಿದ್ದು, ಇಲ್ಲಿ ಕಾರ್ಯಕ್ರಮ ನಡೆಯಲಿದೆ. ತೆಂಕುತಿಟ್ಟಿನಲ್ಲಿ ಸುಮಾರು ೬೦ ವರ್ಷಗಳ ಅನುಭವ ಇರುವ ೭೧ರ ಹರೆಯದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಹಿಂದೆ ಧರ್ಮಸ್ಥಳ, ಕದ್ರಿ, ಕಟೀಲು ಸಹಿತ ನಾನಾ ಮೇಳಗಳಲ್ಲಿ ಹಿಮ್ಮೇಳವಾದಕರಾಗಿ ದುಡಿದಿದ್ದಾರೆ. ಕಳೆದ ೫೦ ವರ್ಷಗಳಿಂದ ಅವರು ಹಿಮ್ಮೇಳ ಶಿಕ್ಷಣ ನೀಡುತ್ತಿದ್ದು, ಸಾವಿರಾರು ಶಿಷ್ಯರನ್ನು ಹೊಂದಿದ್ದಾರೆ.
ಈಗಾಗಲೇ ಸುಬ್ರಹ್ಮಣ್ಯ ಭಟ್ಟರಿಗೆ ಕಸಾಪ ರಾಜ್ಯ ಸಮ್ಮೇಳನದಲ್ಲಿ ಸನ್ಮಾನ, ಜಿಲ್ಲಾ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಸಹಿತ ಹಲವು ಕಡೆಗಳಲ್ಲಿ ಸನ್ಮಾನಗಳು, ಶಿಷ್ಯರಿಂದ ಅಭಿನಂದನಾ ಕಾರ್ಯಕ್ರಮಗಳು ನಡೆದಿವೆ. ಕಳೆದ ವರ್ಷ ಮಂಗಳೂರಿನಲ್ಲಿ ಅವರ ಶಿಷ್ಯರ ಸಮಾವೇಶ ನಡೆದಿತ್ತು. ತೆಂಕುತಿಟ್ಟಿನ ಪ್ರಸಕ್ತ ಹಿಮ್ಮೇಳ ಕಲಾವಿದರ ಪೈಕಿ ಬಹುತೇಕರು ಮಾಂಬಾಡಿ ಶಿಷ್ಯರಾಗಿದ್ದು, ದ.ಕ, ಕಾಸರಗೋಡು ಅಲ್ಲದೆ ಬೆಂಗಳೂರಿನಲ್ಲೂ ಶಿಷ್ಯರಿದ್ದಾರೆ.