ಬಂಟ್ವಾಳ ತಾಲೂಕಿನಲ್ಲಿ ಬಿಪಿಎಲ್ ಕಾರ್ಡು ಪಡೆಯಲು ಅನರ್ಹರಿದ್ದರೂ ಕೆಲವರು ಸುಳ್ಳು ಮಾಹಿತಿ ನೀಡಿ ಪಡೆದಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅಂಥವರು ಸ್ವಯಂಪ್ರೇರಿತರಾಗಿ ಪಡಿತರ ಚೀಟಿಯನ್ನು ಬಂಟ್ವಾಳ ಮಿನಿ ವಿಧಾನಸೌಧದ ಆಹಾರ ಶಾಖೆಗೆ 2019, ಸೆ.30ರೊಳಗೆ ನೀಡಬೇಕು, ತಪ್ಪಿದಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಎಚ್ಚರಿಸಿದ್ದಾರೆ.
www.bantwalnews.com Editor: Harish Mambady
ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಲಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಕೆಲವು ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹದಿದ್ದರೂ ಚೀಟಿ ಪಡೆದು, ಅದರ ಸವಲತ್ತುಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಪಡಿತರ ಚೀಟಿದಾರರು ಸುಳ್ಳು ಮಾಹಿತಿ ನೀಡಿ ಪರಿತರ ಚೀಟಿ ಪಡೆದಿದ್ದರೆ, ಇನ್ನು ಕೆಲವರು ಬಿಪಿಎಲ್ ಪಡಿತರ ಚಚೀಟಿ ಪಡೆದು, ನಂತರ ಬಿಪಿಎಲ್ ಗೆ ಅನರ್ಹರಾಗಿರುವುದು ಕಂಡುಬಂದಿದೆ. ನಾಲ್ಕು ಚಕ್ರದ ಬಿಳಿ ನಂಬರ್ ಪ್ಲೇಟ್ ನ ವಾಹನ ಹೊಂದಿರುವವರು ಕುಟುಂಬದಲ್ಲಿ ಸರಕಾರಿ ಅಥವಾ ಅರೆ ಸರಕಾರಿ ಉದ್ಯೋಗ ಹೊಂದಿರುವವರು, ಆದಾಯ ತೆರಗೆ ಪಾವತಿಸುವವರು, ಪಡಿತರ ಚೀಟಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದೇ ಇರುವವರು, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು, ಮರಣ ಹೊಂದಿದವರ , ಕುಟುಂಬದಲ್ಲಿ ವಾಸವಿಲ್ಲದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು, 7.5 ಎಕ್ರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿರುವವರು, ವಾರ್ಷಿಕ ಆದಾಯ 1,20,000ಕ್ಕಿಂತ ಹೆಚ್ಚು ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1000 ಚ.ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆಯನ್ನು ಹೊಂದಿರುವ ಕುಟುಂಬಗಳಲ್ಲಿರುವವರೂ ಬಿಪಿಎಲ್ ಕಾರ್ಡು ಹೊಂದಿರುವ ಕುರಿತು ಗಮನಕ್ಕೆ ಬಂದಿದೆ. ಅಂಥ ಕುಟುಂಬವು ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಕೆಲಸ ನಿಧಾನ:
ಸೆ.11ರಿಂದ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಯ ಕೆಲಸದ ವೇಳೆಯಲ್ಲಿ ಪುನರ್ ಪ್ರಾರಂಭಿಸಲಾಗಿದೆ. ಪಡಿತರ ಚೀಟಿಯಲ್ಲಿರುವ ಸದಸ್ಯರು ಈ ದಿನಾಂಕದಿಂದ ನವೆಂಬರ್ 2019ರ ಅಂತ್ಯದೊಳಗೆ ನ್ಯಾಯಬೆಲೆ ಅಂಗಡಿಗೆ ಆಧಾರ್ ದಾಖಲೆ ಜೊತೆ ಹಾಜರಾಗಿ ಬೆರಳಚ್ಚು ನೀಡಬೇಕಾಗಿ ಪ್ರಕಟಣೆ ತಿಳಿಸಿದೆ. ಇ ಕೈವೈಸಿ ಕಾರಣಗಳಿಂದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸಗಳು ತಾಲೂಕು ಕಚೇರಿಯಲ್ಲಿ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಇದ್ದು, ಕಾರ್ಡುದಾರರು ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.