ಪುರಸಭೆ ಆಸ್ತಿ ತೆರಿಗೆ ಜೊತೆ ಕಸ ನಿರ್ವಹಣಾ ಶುಲ್ಕವನ್ನು ಅಡ್ವಾನ್ಸ್ ಆಗಿ ವಸೂಲಿ ಮಾಡುವ ಕ್ರಮವನ್ನೇ ಕೈಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬಂಟ್ವಾಳ ಪುರಸಭಾ ಕಚೇರಿ ಮುಂದೆ ಸೆ.17 ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ.
www.bantwalnews.com Editor: Harish Mambady
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿ ಸಂಚಾಲಕ ಬಿ.ಶೇಖರ್, ಅಂದು ಬೆಳಿಗ್ಗೆ 9.30 ಕ್ಕೆ ರಥಬೀದಿಯಲ್ಲಿರುವ ಸ್ವರ್ಣಸೌಧದ ಮುಂಭಾಗದಲ್ಲಿ ಪುರವಾಸಿಗಳು, ವರ್ತಕರು ಸಭೆ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪುರಸಭಾ ಕಚೇರಿಯವರೆಗೆ ಸಾಗಿ ಧರಣಿ ಆರಂಭಿಸಲಾಗುವುದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು, ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಈ ಕ್ರಮ, ಎಲ್ಲ ಚುನಾಯಿತ ಪ್ರತಿನಿಧಿಗಳನ್ನೂ ಪ್ರತಿಭಟನೆಗೆ ಆಹ್ವಾನಿಸಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.
ಪುರವಾಸಿಯೊಬ್ಬ ದೃಢಪತ್ರ ಬೇಕೆಂದು ಕಚೇರಿಗೆ ತೆರಳಿದರೆ ಅಧಿಕಾರಿಗಳು ಕಸದ ಶುಲ್ಕ ಪಾವತಿಸದೆ ದೃಢಪತ್ರ ನೀಡದ ಉದಾಹರಣೆಯು ಇದೆ ಎಂದ ಅವರು ಇದೀಗ ನೀರಿನ ಶುಲ್ಕವನ್ನು ಮನಬಂದಂತೆ ಏರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮತ್ತೋರ್ವ ಸಂಚಾಲಕ ರಾಮಣ್ಣ ವಿಟ್ಲ ದೂರಿದರು.
ಏಕಪಕ್ಷೀಯ ನಿರ್ಧಾರ: ಪುರಸಭೆಯ ಈ ಹಿಂದಿನ ಆಡಳಿತಾವಧಿಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಬಿಟ್ಟರೆ ತೆರಿಗೆ ಜೊತೆ ಶುಲ್ಕ ವಸೂಲಿಯ ಬಗ್ಗೆ ಯಾವುದೇ ನಿರ್ಣಯ ದಾಖಲಾಗಿಲ್ಲ, ಇದು ಪುರಸಭಾಧಿಕಾರಿಗಳ ಏಕಪಕ್ಷೀಯ ನಿರ್ಧಾರ, ತೆರಿಗೆ ಮೂಲಕ ಭೀತಿ ಹುಟ್ಟಿಸುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಮೊನೀಶ್ ಆಲಿ ತಿಳಿಸಿದರು. ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಮಾಜಿ ಸದಸ್ಯರಾದ ಬಿ.ಮೋಹನ್, ಜಗದೀಶ್ ಕುಂದರ್ ,ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ, ಸಾದಿಕ್ ಉಪಸ್ಥಿತರಿದ್ದರು.