ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬರಿಮಾರ್ ಚರ್ಚ್ ನಲ್ಲಿ ಭಾನುವಾರ ಮಾತೆ ಮರಿಯಮ್ಮನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನೂತನವಾಗಿ ಉದ್ಘಾಟನೆಗೊಂಡ ಮಾತೆ ಮರಿಯಮ್ಮನವರಿಗೆ ಸಮರ್ಪಿತ ಗ್ರೊಟ್ಟೊದಲ್ಲಿ ಎಲ್ಲಾ ಭಕ್ತಾದಿಗಳು ಹೂಗಳನ್ನು ಅರ್ಪಿಸುವ ಮುಖಾಂತರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಎಲ್ಲಾ ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತ ಚರ್ಚ್ ಗೆ ಆಗಮಿಸಿ ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಿ ಪರಮ ಪ್ರಸಾದವನ್ನು ಸ್ವೀಕರಿಸಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಆಶೀರ್ವಚಿಸಿದ ತೆನೆಗಳನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಎನ್ನುವ ಬೇಧಭಾವವಿಲ್ಲದೆ ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಂಡರು. ಕಳೆದ 125 ವರ್ಷಗಳಲ್ಲಿ ಹೇಗೆ ಪ್ರೀತಿಯಿಂದ ಜೀವನವನ್ನು ನಡೆಸುತ್ತಾ ಬಂದಿದ್ದೀರಿ ಹಾಗೆಯೇ ಇನ್ನು ಮುಂದೆಯೂ ಪರಸ್ಪರ ಒಬ್ಬರಿಗೊಬ್ಬರು ಕ್ಷಮಿಸುತ್ತಾ ಒಳ್ಳೆಯ ಜೀವನವನ್ನು ನಡೆಸಲು ಫಾದರ್ ಪಿರೇರಾ ಕರೆ ನೀಡಿದರು. ಚರ್ಚ್ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ದಾನಿಗಳ ಹೆಸರುಗಳನ್ನು ವಾಚಿಸಿದರು. ಧರ್ಮಗುರುಗಳು ಎಲ್ಲರಿಗೂ ತೆನೆಗಳನ್ನು ನೀಡುವ ಮುಖಾಂತರ ಸನ್ಮಾನಿಸಿದರು. ಕಾರ್ಯದರ್ಶಿ ಪ್ರೀತಿ ಪಿರೇರಾ ಮತ್ತು ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು. ಎಲ್ಲಾ ಭಕ್ತಾದಿಗಳಿಗೂ ಕಬ್ಬನ್ನು ಹಾಗೂ ಸಿಹಿಯನ್ನು ಹಂಚಲಾಯಿತು.