ಜಕ್ರಿಬೆಟ್ಟಿನ ದಾಸ ರೈ ಮೈದಾನದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ 16ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಗಳು ಶುಕ್ರವಾರ ರಾತ್ರಿ ಸಮಾಪನಗೊಂಡಿತು.
ಮಾಜಿ ಸಚಿವ ಬಿ. ರಮಾನಾಥ ರೈ ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಸಮಾನ ಮನಸ್ಕರ ಸಾರ್ವಜನಿಕ ಸಮಿತಿಯೊಂದಿಗೆ ಬಲ್ಲೋಡಿಗುತ್ತು ಪದ್ಮಶೇಖರ್ ಜೈನ್ ಅಧ್ಯಕ್ಷತೆಯಲ್ಲಿ ನಡೆದಿದೆ. ವಿಶಾಲ ಮಂಟಪದಲ್ಲಿ ಸುಂದರವಾದ ವಿನಾಯಕ ಭವ್ಯಮೂರ್ತಿ ಭಕ್ತರನ್ನು ಆಕರ್ಷಿಸಿದರೆ, ನಿತ್ಯ ನಿರಂತರ ಭಕ್ತರಿಗೆ ಅನ್ನಸಂತರ್ಪಣೆ, ಅತಿಥಿಗಳಿಗೆ ಸತ್ಕಾರದ ವ್ಯವಸ್ಥೆ ಗಮನ ಸೆಳೆಯಿತು.
ಪ್ರತಿದಿನ ಧಾರ್ಮಿಕ ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡಿದವು. ಶ್ರೀ ಗಣೇಶ ಮೂರ್ತಿಯ ಶೋಭಾ ಯಾತ್ರೆಯು ವಿವಿಧ ಜಿಲ್ಲೆಗಳ ಕಲಾ ತಂಡಗಳು, ಸ್ತಭ್ದ ಚಿತ್ರಗಳೊಂದಿಗೆ ವೈಭವಯುತವಾಗಿ ಸುರಿವ ಮಳೆಯನ್ನು ಲೆಕ್ಕಿಸದೆ ನಡೆಯಿತು. ನಾನಾ ಮಠಾಧೀಶರು, ನಾನಾ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದ ಗಣೇಶೋತ್ಸವ ಸಭಾ ಕಾರ್ಯಕ್ರಮಗಳಲ್ಲಿ ಸಮಿತಿಯ ಗೌರವಾಧ್ಯಕ್ಷ ಮಾಜಿಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಗಣೇಶೋತ್ಸವದ ಉದ್ದೇಶದ ಕುರಿತು ವಿವರಿಸಿದರು. ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಬಿ.ಪ್ರವೀಣ್, ಜನಾರ್ದನ ಚಂಡ್ತಿಮಾರ್, ಸ್ಥಳದಾನಿ ಡಾ. ಶಿವಪ್ರಸಾದ್ ರೈ, ಸಂಪತ್ ಕುಮಾರ್ ಶೆಟ್ಟಿ, ಕೆ.ಜಗನ್ನಾಥ, ವಾಸು ಪೂಜಾರಿ, ಪದ್ಮನಾಭ ರೈ, ಪ್ರವೀಣ್ ಕಿಣಿ, ಗಂಗಾಧರ ಪೂಜಾರಿ, ಪ್ರಶಾಂತ್ ಕುಲಾಲ್ ಸಹಿತ ನಾನಾ ಕ್ಷೇತ್ರಗಳ ಗಣ್ಯರು ಸಹಕರಿಸಿದರು. ಎಡ್ತೂರು ರಾಜೀವ ಶೆಟ್ಟಿ, ರಾಜೀವ ಕಕ್ಯಪದವು, ಚೇತನ್ ರೈ ಮಾಣಿ ಮತ್ತಿತರರು ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.