ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿಯಮಿತ ಸಂಸ್ಥೆಯ ನೂತನ ಕಚೇರಿ ಸೆ.8ರಂದು ಮೇಲ್ಕಾರಿನ ರಾಮ್ ದೇವ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
2000ನೇ ಇಸವಿಯಲ್ಲಿ ಆರಂಭಗೊಂಡ ಸೊಸೈಟಿ ಪುತ್ತೂರು, ಮಂಗಳಪದವು ಮತ್ತು ಮೇಲ್ಕಾರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಮೇಲ್ಕಾರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸುಮಾರು 40 ಲಕ್ಷ ರೂ ಮೌಲ್ಯದ 789 ಚ.ಮೀ. ವಿಸ್ತೀರ್ಣದ ಸುಸಜ್ಜಿತ ಸ್ವಂತ ಕಚೇರಿಯಲ್ಲಿ ಕೆಲಸ ಮಾಡಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುವರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಅಡ್ಯೇಯಿ ತಿಳಿಸಿದರು.
ಭದ್ರತಾ ಕೊಠಡಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಂಪ್ಯೂಟರೀಕರಣವನ್ನು ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಕೌಶಲ್ಯಾಭಿವೃದ್ಧಿ ಖಾತೆಯನ್ನು ತಹಶೀಲ್ದಾರ್ ರಶ್ಮಿ ಎಸ್.ಆರ್ ಉದ್ಘಾಟಿಸುವರು. ವೇ.ಮೂ. ಶಿವರಾಮ ಮಯ್ಯ, ಹವ್ಯಕ ಮಹಾಮಂಡಲ ಕಾರ್ಯದರ್ಶಿ ಪಿ.ನಾಗರಾಜ ಭಟ್, ಉಡುಪಿ ಜಿಲ್ಲಾ ಡಿಡಿಪಿಐ ಶೇಷಶಯನ ಕೆ, ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ಬಂಟ್ವಾಳ ಉಪಾಧ್ಯಕ್ಷ ಮುರುವ ನಡುಮನೆ ಮಹಾಬಲ ಭಟ್, ಸುಬ್ರಹ್ಮಣ್ಯ ಸಹಕಾರಿ ಸಂಘ ಅಧ್ಯಕ್ಷ ಪಿ.ಎನ್.ನಾಗೇಶ ರಾವ್ ಮತ್ತು ಮಂಗಳೂರಿನ ಸರಕಾರಿ ಪ್ರ.ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ ಉಪಸ್ಥಿತರಿರುವರು. ಕೌಶಲ್ಯಾಭಿವೃದ್ಧಿ ಖಾತೆ ಸೊಸೈಟಿಯ ವೈಶಿಷ್ಟ್ಯವಾಗಿದ್ದು, ಪಾರಂಪರಿಕ ಕೌಶಲ್ಯಗಳ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ಪಡೆದುಕೊಂಡು ಸಾಧನೆ ಮಾಡಿದವರಿಗೆ ಮರುಪಾವತಿ ಅವಧಿಯಲ್ಲಿ ಬಡ್ಡಿಯ ಶೇ.10ನ್ನು ಸಹಾಯಧನವಾಗಿ ವಾಪಸ್ ಕೊಡುವ ಯೋಜನೆ ಇದು ಎಂದವರು ಹೇಳಿದರು. ಕಾರ್ಯಕ್ರಮದ ಬಳಿಕ ಅಪರಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ವೀರ ಅಭಿಮನ್ಯು ಎಂಬ ಯಕ್ಷಗಾನ ಜೋಡಾಟ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಟಿ.ಜಿ. ರಾಜಾರಾಮ ಭಟ್, ಜಯಶಂಕರ ಬಾಸ್ತ್ರಿತ್ತಾಯ, ರಾಜಾರಾಮ ಐತಾಳ್ ಕೆ ಮತ್ತು ಸೂರ್ಯನಾರಾಯಣ ಪೂವಳ ಉಪಸ್ಥಿತರಿದ್ದರು.
www.bantwalnews.com Editor: Harish Mambady