ಯಾರು ಸುಕ್ರಿಬೊಮ್ಮಗೌಡ? ಇಲ್ಲಿದೆ ವಿವರ
ಯಾವುದೇ ಪ್ರಶಸ್ತಿ, ಪ್ರಚಾರ, ಪುರಸ್ಕಾರಗಳಿಗೆ ಆಸೆ ಪಡದೇ, ಸಾಮಾಜಿಕ ಚಿಂತನೆಗಳೊಂದಿಗೆ ಪ್ರಕೃತಿಯನ್ನು ಉಳಿಸುವ ಸೇವೆ ಗಳೊಂದಿಗೆ , ಸ್ತ್ರೀ ದೌರ್ಜನ್ಯದ ವಿರುದ್ಧ ಪ್ರಬಲ ಖಂಡನೆಗಳೊಂಡಿಗೆ ತನ್ನ ಸಂಪೂರ್ಣ ಬದುಕನ್ನೇ ಹಾಲಕ್ಕಿ ಬುಡಕಟ್ಟು ಸಮುದಾಯದ ಒಳಿತಿಗೆ ಮುಡಿಪಾಗಿಟ್ಟ ವಿಶಿಷ್ಟ ಮಹಿಳೆ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ .
ಶಾಲೆಯ ಮೆಟ್ಟಿಲನ್ನು ಏರದೇ ಓದಲು ಬರೆಯಲು ತಿಳಿಯದೇ ಇದ್ದರೂ ವಿಶ್ವ ವಿದ್ಯಾನಿಲಯದಲ್ಲಿ ಜಾನಪದ ಹಾಡುಗಳ ಬಗ್ಗೆ ಉಪನ್ಯಾಸಕಿ ಆದದ್ದು, ಪ್ರಶಸ್ತಿಗಳಿಂದ ದೂರ ಇದ್ದರೂ ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ ಎಂದರೆ ಇವರ ಸಾಧನೆಯನ್ನು ಗಮನಿಸಬಹುದು. ಓದು, ಬರಹ ಅರಿಯದ ಇವರು 4000 ಕ್ಕಿಂತ ಹೆಚ್ಚು ಜಾನಪದ ಹಾಡುಗಳನ್ನು ರಚಿಸಿ ಆದು ಎಲ್ಲೂ ಕೃತಿ ರೂಪದಲ್ಲಿ ಇರದೇ ಕೇವಲ ಇವರ ಮನದ ಹೊತ್ತಗೆಯಲ್ಲಿ ದಾಖಲಾಗಿದೆ ಎಂದರೆ ಅದೇನು ನೆನಪುಗಳ ಚೇತನಾ ಶಕ್ತಿ ಇವರದ್ದು ಅಂದರೆ ಅಚ್ಚರಿ ಅಲ್ಲದೆ ಇನ್ನೇನು..!?
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಖೇಣಿ ಬಡಿಗೇರ ತಾಲೂಕಿನ ಸುಕ್ರಿ ಅಜ್ಜಿ ತನ್ನ ವಯಸ್ಸು 84 ದಾಟಿದರೂ ಜೀವನೋತ್ಸಾಹ , ಲವಲವಿಕೆ ಯುವಕ, ಯುವತಿಯರನ್ನು ನಾಚಿಸುವಂತೆ ಇದೆ. ಬಡಿಗೇರ ಸುತ್ತಮುತ್ತ ಮದ್ಯಪಾನದ ವಿರುದ್ಧ ಇವರು ಮಾಡಿರುವ ಚಳುವಳಿ ಹಿಂದೊಮ್ಮೆ ಇಡೀ ಸಮಾಜದಲ್ಲಿ ಒಂದು ಬದಲಾವಣೆಯ ಕ್ರಾಂತಿಯೇ ಆಗಿತ್ತು.
ಹಾಲು ಮತ್ತು ಅಕ್ಕಿ ಬೆಳೆಸುವುದು ಇವರ ಮೂಲ ಕಸುಬು ಆದುದರಿಂದ ಇವರಿಗೆ ಹಾಲಕ್ಕಿ ಸಮುದಾಯ ಎಂಬ ಹೆಸರಾಗಿದೆ. ಒಟ್ಟಾರೆ ಸುಕ್ರಿಅಜ್ಜಿ ಈ ನಾಡಿನ ಸೆಲೆಬ್ರಿಟಿ ಅಂತೂ ಕಟು ಸತ್ಯ. ಅಜ್ಜಿಯ ಹಾಡುಗಳು ಶಾಶ್ವತ ದಾಖಲೆ ಆಗಿ ಉಳಿಯಬೇಕು ಅದು ಭವಿಷ್ಯದ ಸಮಾಜದಲ್ಲಿ ಬೆಳಗಬೇಕು ಎಂಬುದು ನಮ್ಮೆಲ್ಲರ ಆಶಯ. ದಕ್ಷಿಣ ಕನ್ನಡ ಛಾಯಾಚಿತ್ರಕಾರ ಸಂಘ ಆಯೋಜಿಸುವ ‘ ವೃಕ್ಷ ಸುರಕ್ಷಾ ‘ ಕಾರ್ಯಕ್ರಮಕ್ಕೆ ಇವರು ಮಂಗಳೂರಿಗೆ ಬರಲಿದ್ದಾರೆ.