ಬಂಟ್ವಾಳ

ಮಳೆಯ ಆಟ, ಫಲಾನುಭವಿಗಳಿಗೆ ಸರ್ವರ್ ಕಾಟ

ಬಂಟ್ವಾಳ ತಾಪಂ ಸಭೆಯಲ್ಲಿ ಚರ್ಚೆಗೀಡು ಮಾಡಿದ ವ್ಯವಸ್ಥೆಯ ನೋಟ

www.bantwalnews.com Editor: Harish Mambady

ಜನಸಾಮಾನ್ಯರಿಗೆ ಅರ್ಥ ಮಾಡಿಸಿಕೊಳ್ಳಲು ಕಷ್ಟವಾಗುವ ಸರ್ವರ್ ಸಮಸ್ಯೆ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ, ಮಳೆಯಿಂದ ಹಾನಿ ವಿಚಾರಗಳು ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಪಾಲ್ಗೊಂಡಿದ್ದರು.

ಈ ಬಾರಿ ಸುರಿದ ಭಾರಿ ಮಳೆಯಿಂದ ಬಂಟ್ವಾಳ ತಾಲೂಕಿನ ಶಾಲಾ ಕಟ್ಟಡಗಳಿಗೂ ಹಾನಿಯಾಗಿದೆ. ಇದರ ದುರಸ್ತಿಗೆ ಕೂಡಲೇ ಗಮನಹರಿಸಬೇಕಾದ ಅಗತ್ಯವಿದೆ . ಈ ಬಾರಿಯ ಮಳೆಯಿಂದಾಗಿ ತಾಲೂಕಿನ 68 ಹಿರಿಯ ಪ್ರಾಥಮಿಕ ಹಾಗೂ 13 ಪ್ರೌಢಶಾಲೆಯ ಕಟ್ಟಡಗಳಿಗೆ ಹಾನಿ ಸುಮಾರು 2.82 ಕೋ.ರೂ. ನಷ್ಟ ಸಂಭವಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದರು.

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಭೀತಿ, ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಕುರಿತು ಎಚ್ಚರಿಕೆ, ಸೂಚನೆಯ ನೋಟಿಸ್ ಕೊಟ್ಟರೂ ಅದಿನ್ನೂ ಪಾಲನೆಯಾಗುತ್ತಿಲ್ಲ. ಬಿಸಿಲು ಮತ್ತು ಮಳೆಯ ವಾತಾವರಣದಿಂದ ಆರೋಗ್ಯ ಸಮಸ್ಯೆಗಳು ತಾಲೂಕಿನಲ್ಲಿ ಉದ್ಭವಿಸುತ್ತಿದ್ದು, ಇದಕ್ಕೆ ಪೂರಕವಾಗಿ ಶುಚಿತ್ವದತ್ತ ಗಮನಹರಿಸಲು ಸ್ಥಳೀಯಾಡಳಿತಗಳು ಸಹಕರಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಹೇಳಿದರು. ಬಂಟ್ವಾಳ ಪುರಸಭೆ ಸಹಿತ ಪಂಚಾಯಿತಿಗಳು ಈ ಕುರಿತು ಗಮನಹರಿಸದೇ ಇದ್ದರೆ ಇಲ್ಲಿಯೂ ಡೆಂಗೆಯಂಥ ಸಮಸ್ಯೆಗಳು ಉಲ್ಬಣಗೊಳ್ಳಬಹುದು ಎಂದವರು ಹೇಳಿದರು.

ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿ ಅರ್ಜಿದಾರರು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯ ಉಸ್ಮಾನ್ ಕರೋಪಾಡಿ ಗಮನ ಸೆಳೆದರು. ಯೋಜನೆಗಳ ಅನುಷ್ಠಾನದ ಸಂದರ್ಭ ಆಗುವ ತೊಡಕುಗಳನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿದರೆ, ಗೊಂದಲಗಳು ಸಾಕಷ್ಟು ಪರಿಹಾರವಾಗುತ್ತವೆ ಎಂದು ಐವನ್ ಹೇಳಿದರು.

ಆರೋಗ್ಯ, ಕೃಷಿ, ತೋಟಗಾರಿಕೆ ಸಹಿತ ಹಲವು ಇಲಾಖೆಗಳಲ್ಲಿ ಸರ್ವರ್ ಸಮಸ್ಯೆ, ಸಿಬ್ಬಂದಿ ಕೊರತೆ ಮತ್ತಿತರ ನ್ಯೂನತೆಗಳಿಂದಾಗಿ ಸಾರ್ವಜನಿಕರಿಗೂ ಅಧಿಕಾರಿಗಳ ಮಧ್ಯೆ ಸಂಘರ್ಷ, ಮನಸ್ತಾಪಗಳು ಏರ್ಪಡುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಮಸ್ಯೆಯ ಮಾಹಿತಿಯನ್ನು ಒದಗಿಸಿದರೆ, ಕೆಲಸ ಸಲೀಸಾಗಿ ನಡೆಯುತ್ತದೆ ಎಂದರು. ಈ ಸಂದರ್ಭ ಮಾತನಾಡಿದ ತಾಪಂ ಸದಸ್ಯ ಆದಂ ಕುಂಞ, ತೋಟಗಾರಿಕಾ ಇಲಾಖೆಯಿಂದ ಕಳೆದ ವರ್ಷದ ಕೊಳೆರೋಗದ ಹಣವೇ ಬರಲಿಲ್ಲ ಎಂದರು.

ಶ್ರದ್ಧಾಂಜಲಿ: ಕೇಂದ್ರ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಹಿನ್ನೆಲೆಯಲ್ಲಿ ತಾಪಂ ಸದಸ್ಯ ಪ್ರಭಾಕರ ಪ್ರಭು ಮೌನ ಪ್ರಾರ್ಥನೆಯ ಕುರಿತು ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಭೆ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.

ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ಆದಂ ಕುಂಞ, ಎ.ಆರ್. ಹೈದರ್, ರಮೇಶ್ ಕುಡ್ಮೇರು, ಗಣೇಶ್ ಸುವರ್ಣ ತುಂಬೆ, ಸಂಜೀವ ಪೂಜಾರಿ, ಶಿವಪ್ರಸಾದ್ ಕನಪ್ಪಾಡಿ, ಯಶವಂತ ಪೊಳಲಿ, ಮಲ್ಲಿಕಾ ಶೆಟ್ಟಿ, ಜಿಪಂ ಸದಸ್ಯೆ ಜಯಶ್ರೀ ಕೋಡಂದೂರು ವಿವಿಧ ವಿಷಯಗಳ ಕುರಿತು ಮಾತನಾಡಿದರು.

ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಆರ್. ಬಂಗೇರ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಪಿಡಬ್ಲ್ಯುಡಿ ಎಇಇ ಷಣ್ಮುಗಂ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts