ಮೊಡಂಕಾಪುವಿನಲ್ಲಿ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ನಡೆಸಿದ ಪ್ರಕರಣದಲ್ಲಿ ಇಬ್ಬರಿಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ (ತಲಾ) ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ ತೀರ್ಪು ಪ್ರಕಟಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಬೇಲೂರು ಗ್ರಾಮದ ಪ್ರವೀಣ್ ಕೆ.ಜಿ (33) ಮತ್ತು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಬೇಗೂರು ಗ್ರಾಮದ ಸಂಜಯ್ (31) ಶಿಕ್ಷೆಗೊಳಗಾದವರು.
ಬಂಟ್ವಾಳ ಬಿ.ಸಿ.ರೋಡ್ ಸಮೀಪದ ಮೊಡಂಕಾಪುವಿನ ಕಾಲೇಜೊಂದರ ಪಕ್ಕದಲ್ಲಿ ವಾಸಿಸುತ್ತಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ ಅವರ ಮನೆಗೆ ಕಳೆದ ವರ್ಷ ಆಗಸ್ಟ್ 8ರಂದು ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ಜನಾರ್ದನ ಹೊಳ್ಳ ಅವರಿಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ 76 ಸಾವಿರ ರೂ ಮೌಲ್ಯದ ಸರವನ್ನು ಕಸಿದು ಪರಾರಿಯಾದ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಅದೇ ತಿಂಗಳು ಪ್ರವೀಣ್ ನನ್ನು ಬಂಧಿಸಲಾಗಿತ್ತು. ಚಿನ್ನದ ಸರ, ಹಲ್ಲೆ ನಡೆಸಲು ಉಪಯೋಗಿಸಿದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡು, ಎರಡನೇ ಆರೋಪಿಯ ಶೋಧದಲ್ಲಿದ್ದ ಪೊಲೀಸರಿಗೆ ಆತ ಪ್ರಕರಣವೊಂದರಲ್ಲಿ ಬಂಧಿತನಾಗಿ ಹಾಸನ ಜೈಲಿನಲ್ಲಿರುವುದು ಗೊತ್ತಾಗಿತ್ತು. ಬಾಡಿ ವಾರಂಟ್ ಮೂಲಕ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ವೃತ್ತನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
Editor: Harish Mambady