ಭಗವದ್ಗೀತೆ ಬೋಧನೆಯ ಮುಖಾಂತರ ಅರ್ಜುನನಿಗೆ ಆತ್ಮಸ್ಥೈರ್ಯ ತುಂಬಿದ ಶ್ರೀ ಕೃಷ್ಣ ಜಗತ್ತಿನ ಪ್ರಥಮ ಮ್ಯನೇಜ್ ಮೆಂಟ್ ಗುರು ಎಂದು ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಕಾರ್ಯದರ್ಶಿ ಎ.ಅಶೋಕ್ ಕುಮಾರ್ ಅವರು ಹೇಳಿದರು.
ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಶ್ರೀ ಕೃಷ್ಣ ಸಂದೇಶ ಪ್ರತಿ ಕಾಲಕ್ಕೂ ಪ್ರಸ್ತುತ. ಈ ನಿಟ್ಟಿನಲ್ಲಿ ಯುವ ಜನತೆಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕೆಂದು ತಿಳಿಸಿದರು.
ಉದ್ಯಮಿ, ದಾನಿ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಅವರು, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇಞಸ್ ಅವರು ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಆಹಾರ ಶಾಖೆಯ ನಿರೀಕ್ಷಕ ಶ್ರೀನಿವಾಸ್, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಬಂಟ್ವಾಳ ತಾಲೂಕು ಯಾದವ್ ಸಭಾ ಪ್ರತಿನಿಧಿ ಚಂದ್ರಶೇಖರ ಬಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಚೇರಿಯ ಅಧಿಕಾರಿಗಳು, ಸಿಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು,ಸಾರ್ವಜನಿಕರು ಉಪಸ್ಥಿತರಿದ್ದರು.