ಕಲ್ಲಡ್ಕ ಪೇಟೆಯನ್ನು ಒಳಪಡುವ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಭಟ್ ಹೇಳಿದ್ದಾರೆ.
ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್ ಜಿಲ್ಲಾ ನೆರವು ಘಟಕ ದ.ಕ ಜಿಲ್ಲೆ ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ಕಾರ್‍ಯಗಾರ ಮತ್ತು ಅಂಗಡಿ ಮಾಲೀಕರ ಜೊತೆ ಸಮಾಲೋಚನಾ ಸಭೆ ಬುಧವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಘನ ತ್ಯಾಜ್ಯ ಹಾಗೂ ದ್ರವತ್ಯಾಜ್ಯ ವಿಲೇವಾರಿಯ ಬಗ್ಗೆ ಪಂಚಾಯತ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಕಲ್ಲಡ್ಕ ಪೇಟೇಯ ಅಂಗಡಿ ಮಾಲೀಕರ ಸಹಕಾರ ಅಗತ್ಯ. ಕಲ್ಲಡ್ಕ ಪೇಟೇಯಲ್ಲಿ ಕಸವನ್ನು ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚ ಪರಿಸರ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್ ಜೊತೆಗೆ ಊರಿನ ಜನರ ಸಹಕಾರ ಕೂಡ ಬಹಳ ಅಗತ್ಯ ಎಂದರು.
ಪಂಚಾಯತ್ ವತಿಯಿಂದ ಪ್ರತಿ ಅಂಗಡಿ ಮಾಲೀಕರಿಗೆ ಹಸಿಕಸ ಸಂಗ್ರಹಣೆಗೆ ಈಗಾಗಲೇ ಗ್ರಾಮ ಪಂಚಾಯತ್ ವತಿಯಿಂದ ಟಬ್ ಅನ್ನು ಉಚಿತವಾಗಿ ನೀಡಿದ್ದು ಪ್ರಸ್ತುತ ಒಣಕಸವನ್ನು ಸಂಗ್ರಹಣೆ ಮಾಡುವ ದೃಷ್ಠಿಯಿಂದ ಸುಮಾರು ೨೦೦ರೂ ವೆಚ್ವದಲ್ಲಿ ಒಣಕಸ ಸಂಗ್ರಹ ಚೀಲ ಮತ್ತು ಕಬ್ಬಿಣದ ಸ್ಟ್ಯಾಂಡ್ ಮಾಡಿದ್ದು ಗ್ರಾಹಕರು ಇದರ ವೆಚ್ಚವನ್ನು ಭರಿಸುತ್ತಾರೆ. ಇದನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ.ಪೂಜಾರಿ ಸಾಂಕೇತಿಕವಾಗಿ ಗ್ರಾಹಕರಿಗೆ ನೀಡಿದರು.
ಪಂಚಾಯತ್ ಉಪಾದ್ಯಕ್ಷ ಮಹಮ್ಮದ್ ಮುಸ್ತಾಫ ಕೆ.ಎಸ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ನೆರವು ಘಟಕದ ಮಂಜುಳಾ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಾನಂದ ಪೂಜಾರಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ ಕಾರ್‍ಯಕ್ರಮ ನಿರೂಪಿಸಿ ವಂದಿಸಿದರು.
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಂಪರ್ಕ ಸಂಖ್ಯೆ: 9448548127