ಪ್ರಾಕೃತಿಕ ವಿಕೋಪದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲುಕಿನಲ್ಲಿ ವ್ಯಾಪಕ ಹಾನಿಯಾಗಿದ್ದು, ರಾಜ್ಯ ಸರಕಾರ ಕೊಡಗು ಮಾದರಿಯಲ್ಲಿ ಅನುದಾನದ ಪ್ಯಾಕೇಜ್ ಒದಗಿಸಬೇಕು ಎಂದು ಕೆಪಿಸಿಸಿ ಒತ್ತಾಯಿಸಿದೆ.
ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಸ್ಥಳಗಳನ್ನು ಕೆಪಿಸಿಸಿ ನಿಯೋಗ ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ತುರ್ತು ಪರಿಹಾರ ನೀಡಲು ಸರಕಾರ ಗಮನಹರಿಸಿಲ್ಲ. ಕೇಂದ್ರದ ಪರಿಹಾರ ಇನ್ನೂ ಘೋಷಣೆ ಆಗಿಲ್ಲ. ಯಡಿಯೂರಪ್ಪ ಹಿಂದೆ ಸಿಎಂ ಆಗಿದ್ದ ಸಂದರ್ಭ ಅಂದಿನ ಪ್ರಧಾನಿ ಮನಮೋಹನ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 2 ಸಾವಿರ ಕೋಟಿ ರೂ ಪರಿಹಾರ ಕ್ರಮವಾಗಿ ಘೋಷಿಸಿದ್ದರು. ಈ ಬಾರಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರೂ ಕರ್ನಾಟಕಕ್ಕೆ ಸಮರ್ಪಕ ಪರಿಹಾರ ದೊರಕಿಲ್ಲ ಎಂದು ಆಪಾದಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಪಂ, ತಾಪಂಗಳು ಸಕಾಲದಲ್ಲಿ ಸಹಕಾರ ನೀಡಬೇಕು, ಪ್ರಧಾನಿ ಬಂದು ಇಲ್ಲಿ ವೈಮಾನಿಕ ಸಮೀಕ್ಷೆ ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ತು ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಜಯಂತಿ ಪುಜಾರಿ, ಮಲ್ಲಿಕಾ ಶೆಟ್ಟಿ, ಇದಿನಬ್ಬ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೆಪಿಸಿಸಿ ತಂಡ ಬಂಟ್ವಾಳ ತಾಲೂಕಿನ ನಾನಾ ಕಡೆಗಳಲ್ಲಿ ನಂಚರಿಸಿತು.