ಕರ್ನಾಟಕ ಮತ್ತು ಕೇರಳದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ 12ನೇ ವರ್ಷದ ಭೂಮಿ ಹಬ್ಬ ಬಂಟ್ವಾಳದ ಪೊಸಳ್ಳಿಯ ಕುಲಾಲ ಭವನದಲ್ಲಿ ಭಾನುವಾರ ನಡೆಯಿತು.
ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶಿಕ್ಷಣ, ಆರ್ಥಿಕವಾಗಿ ಬಲಿಷ್ಠರಾಗುವ ಮೂಲಕ ಸಮುದಾಯದ ಜನರು ಪ್ರಗತಿಶೀಲರಾಗಲು ಸಾಧ್ಯ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಯುವಕರು ತಮ್ಮ ಪೂರ್ವಜರ ಸಂಕಷ್ಟಗಳನ್ನು ಅರಿಯಬೇಕು, ಅವರು ಪಟ್ಟ ಕಷ್ಟಕಾರ್ಪಣ್ಯಗಳೇನೆಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಕೇರಳ ಅಧ್ಯಕ್ಷೆ ಅಮ್ಮಣ್ಣಿ ಕೊರಗ ಬೆಳ್ವೆ ಮಾತನಾಡಿ, ಭೂಮಿ ಹಬ್ಬದ ಹಿಂದಿನ ಹೋರಾಟ, ಪರಿಶ್ರಮಗಳನ್ನು ಕೊರಗ ಬಂಧುಗಳು ತಿಳಿಯಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ, ಸಾಕ್ಷರತಾ ಆಂದೋಲನದ ಸಂದರ್ಭ ಪುತ್ತೂರಿನಲ್ಲಿ ನಡೆಸಿದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು. ಅತಿಥಿಗಳಾಗಿ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮ ಅಧ್ಯಕ್ಷ ಶಕುಂತಳಾ ನೇಜಾರು, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ಅಧ್ಯಕ್ಷ ಸಂಜೀವ ಮಂಗಿಲಪದವು ಭಾಗವಹಿಸಿದ್ದರು. ಸಮುದಾಯದ ಹಿರಿಯ ಮಹಿಳೆ ತನಿಯರು ಕಾಯರ್ ಪಲ್ಕೆ ಹಬ್ಬದ ಜ್ಯೋತಿ ಬೆಳಗಿಸಿದರು. ಮತ್ತೋರ್ವ ಹಿರಿಯ ಮಹಿಳೆ ಭಾರತಿ ಕೆಂಜೂರು ಅತಿಥಿಗಳಿಗೆ ಸವಿಜೇನು ಹಂಚಿದರು. ಸಮುದಾಯದ ಮುಖಂಡ ಮೋಹನ್ ಅಡ್ವೆ ಹಬ್ಬದ ಸಂದೇಶ ನೀಡಿ, ನಡೆದುಬಂದ ದಾರಿಯನ್ನು ಮರೆಯಬಾರದು ಎಂದರು. ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಪುತ್ರ ಹೆಬ್ರಿ ಸ್ವಾಗತಿಸಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕರ್ನಾಟಕ ಕೇರಳ ಪ್ರಧಾನ ಕಾರ್ಯದರ್ಶಿ ದಿವಾಕರ ಕಳ್ತೂರು ವಂದಿಸಿದರು. ಶೋಭಾ ಮತ್ತು ಸೂರಜ್ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳಿಂದ ಸುಮಾರು 500ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.