ಯಕ್ಷಗಾನ

ಸೆ.14ರಂದು ಭ್ರಾಮರೀ ಯಕ್ಷವೈಭವ, ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರಿನ ಭ್ರಾಮರೀ ಯಕ್ಷಮಿತ್ರರು ಬಳಗದ ಆಶ್ರಯದಲ್ಲಿ ಸೆಪ್ಟಂಬರ್ 14 ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜರಗಲಿರುವ ಭ್ರಾಮರೀ ಯಕ್ಷವೈಭವ 2019 ರ ಆಮಂತ್ರಣ ಪತ್ರಿಕೆ ಬಿಡುಗಡೆಯು ಮಂಗಳೂರಿನಲ್ಲಿ ಜರಗಿತು.
ಮಂಗಳಾ ಬ್ಯಾಡ್ಮಿಂಟನ್ ಎಸೋಸಿಯೇಶನ್ ನ ಅಧ್ಯಕ್ಷರಾದ ಸಿ.ಎಸ್.ಭಂಡಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಾಟ್ಸಪ್ ಬಳಗವಾಗಿ ಆರಂಭವಾದ ಸಂಸ್ಥೆಯೊಂದು ನೋಂದಾವಣೆಗೊಂಡು ಕಳೆದ ನಾಲ್ಕು ವರ್ಷಗಳಿಂದ ನಿರಂತವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಯಕ್ಷಗಾನದ ಸಾಧಕರಿಗೆ,ನೇಪಥ್ಯ ಕಲಾವಿದರನ್ನೂ ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ಅತ್ಯಂತ ಶಿಸ್ತುಬದ್ದ ಬಳಗವಾಗಿ ಯಕ್ಷಗಾನವನ್ನು ಪ್ರೋತ್ಸಾಹಿಸುವ ಬಳಗದ ಶ್ರಮ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ನಾ ಕಂಡಂತೆ ಕಾಳಿಂಗ ನಾವಡರು ಕೃತಿ ಬಿಡುಗಡೆಗೊಳ್ಳಲಿದ್ದು ಅದರ ಬಗೆಗಿನ ವಿವರವನ್ನು ಕೃತಿಕಾರರಾದ ಭಾಗವತ ಸುರೇಂದ್ರ ಪಣಿಯೂರು ಸಭೆಗೆ ನೀಡಿದರು.
ಸೆಪ್ಟಂಬರ್ 14 ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 7 ಕ್ಕೆ  ಜರಗುವ ಕಾರ್ಯಕ್ರಮವನ್ನು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಎ ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದು ,ಹಿರಿಯ ಸಾಹಿತಿ ಯಕ್ಷಗಾನ ಕವಿ ಅಂಬಾತನಯ ಮುದ್ರಾಡಿ ನಾ ಕಂಡಂತೆ ಕಾಳಿಂಗ ನಾವಡರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಪುತ್ತೂರು, ಸುರತ್ಕಲ್,ಬಪ್ಪನಾಡು,ಬೆಂಕಿನಾಥೇಶ್ವರ,ಸುಬ್ರಹ್ಮಣ್ಯ ಮೇಳಗಳಲ್ಲಿ  ಹಾಗೂ ಹವ್ಯಾಸಿ ಕಲಾ ಸಂಘಗಳಲ್ಲಿ  ಕಲಾ ಸೇವೆ ನೀಡುತ್ತಾ ಬಂದಿರುವ ಪಾರೆಕೋಡಿ ಗಣಪತಿ ಭಟ್ ಅವರಿಗೆ ಭ್ರಾಮರೀ ಯಕ್ಷಮಿತ್ರರು  ಮಂಗಳೂರು ಬಳಗವು ಈ ಭಾರಿಯ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಿದೆ.
ನೇಪಥ್ಯ ಕಲಾವಿದರಿಗೆ ನೀಡಲಾಗುವ ಪ್ರಶಸ್ತಿಯನ್ನು ಕಟೀಲು ಮೇಳ,ಹೊಸನಗರ ಮೇಳ,ಎಡನೀರು, ಪ್ರಸ್ತುತ ಹನುಮಗಿರಿ ಮೇಳದಲ್ಲಿ ನೇಪಥ್ಯ ಕಲಾವಿದರಾಗಿ ಕಲಾ ಸೇವೆ ಮಾಡುತ್ತಿರುವ ಕೃಷ್ಣಪ್ಪ ಪೂಜಾರಿ ಹಾಗೂ  ಕಟೀಲು ಮೇಳ, ಗಣೇಶ ಕಲಾವೃಂದ ಪೈವಳಿಕೆ,ಎಡನೀರು ಮೇಳಗಳಲ್ಲಿ ನೇಪಥ್ಯ ಕಲಾವಿದರಾಗಿದ್ದ ನಾರಾಯಣ ಪುರುಷ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಬಳಗದ ಅಧ್ಯಕ್ಷರಾದ ವಿನಯಕೃಷ್ಣ ಕುರ್ನಾಡು ವಿವರಿಸಿದರು.
ಇಡೀ ರಾತ್ರಿ ಯಕ್ಷಗಾನ:
ಸಭಾ ಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚೂಡಾಮಣಿ, ರಾಮಾಂಜನೇಯ, ದ್ರೌಪದಿ ಪ್ರತಾಪ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶವಿರುತ್ತದೆ ಎಂದು ಅವರು ತಿಳಿಸಿದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ